ಬೆಳಗಾವಿ : ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಮೀಸಲಾತಿಯು ಈಗ ಜಾರಿಯಲ್ಲಿರುವ ಮೀಸಲಾತಿಯನ್ನು ದಾರಿ ತಪ್ಪಿಸುವ ತಂತ್ರಗಾರಿಕೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ನಿಯಮ 69 ಅಡಿಯಲ್ಲಿ ವಿಧಾನಸಭೆಯಲ್ಲಿ ಎಸ್‌ಸಿ, ಎಸ್ಟಿ ಮೀಸಲಾತಿಯ ಚರ್ಚೆಯಲ್ಲಿ ಮಾತನಾಡಿದ ಅವರು, ಮನುಷ್ಯನನ್ನು ಹಿಂದೆ ಒಂದು ಕಸುಬಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಇದರ ವಿರುದ್ಧ ಅಂಬೇಡ್ಕರ್ ಮನುಸ್ಮೃತಿ ಸುಟ್ಟಿದ್ದರು. ಜಾತಿ ಹೆಸರಿನಲ್ಲಿ ಮನುಷ್ಯನಿಗೆ ವಿಕಾಸಗೊಳ್ಳಲು ಅವಕಾಶ ಕೊಟ್ಟಿರಲಿಲ್ಲ. ಅದರ ವಿರುದ್ಧ ಸಂವಿಧಾನದಲ್ಲಿ ಸಮಾನತೆ ತರಲಾಯಿತು. ಆದರೆ ಈಗ ಮೀಸಲಾತಿಯನ್ನು ದುರ್ಬಲ ಮಾಡುವ ಪ್ರಯತ್ನ ಆಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದಾದರೆ ನಮ್ಮ ವಿರೋಧ ಇಲ್ಲ. ಆದರೆ ಇದಕ್ಕೆ ಮೀಸಲಾತಿ ಪದ ಬಳಸುವುದು ಸರಿಯಲ್ಲ. ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮ ಅಲ್ಲ ಎಂದರು.
ತಮ್ಮದಲ್ಲದ ತಪ್ಪಿಗೆ ಅಪಮಾನ ಅನುಭವಿಸಿದ್ದಾರೆ. ಅವರಿಗೆ ಬಿಡುಗಡೆಯ ಪ್ರಯತ್ನ ಮೀಸಲಾತಿಯಾಗಿದೆ. ಆದರೆ ಈಗ ಜಾಣತನದಿಂದ ಇದನ್ನು ಗೊಂದಲ ಮಾಡುತ್ತಿದ್ದಾರೆ. ಇಡಬ್ಲ್ಯೂಎಸ್ ಈಗ ಜಾರಿಯಲ್ಲಿರುವ ಮೀಸಲಾತಿಯನ್ನು ದಾರಿತಪ್ಪಿಸುವ ತಂತ್ರಗಾರಿಕೆ ಎಂದು ಆರೋಪಿಸಿದರು.
ಜಾತಿ ವ್ಯವಸ್ಥೆ..ಏನ್ಲಾ, ಬುದ್ದಿ, ಸ್ವಾಮಿ, ಸಾಹೇಬ್ರು.. ಸದನದಲ್ಲಿ ಸ್ವಾರಸ್ಯಕರ ಚರ್ಚೆ : ವಿಧಾನಸಭೆಯಲ್ಲಿ ಏನ್ಲಾ, ಬುದ್ಧಿ, ಸ್ವಾಮಿ ಪದಬಳಕೆಗಳು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಎಸ್ ಟಿ ಎಸ್ ಸಿ ಮೀಸಲಾತಿ ಹೆಚ್ಚಳ ವಿಚಾರವಾಗಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಕುಮಾರ್ ಮೇಲ್ಜಾತಿಯಲ್ಲಿ ಹುಟ್ಟಿದ್ದೀರಿ ಎಂದು ಸ್ವಾಮಿ ಅಂತ ಕರೆಯುತ್ತಾರೆ. ಕೆಳ ಜಾತಿಯ ಶ್ರೀಮಂತ ಬಂದರೆ ಏನ್ಲಾ ಅನ್ನುತ್ತಾರೆ. ಮೇಲ್ವರ್ಗದ ಬಡವ ಬಂದರೆ ನಮಸ್ಕಾರ ಬುದ್ದಿ ಅಂತಾರೆ ಎಂದು ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಕಡೆ ನೋಡಿ, ಅದಕ್ಕೆ ನಿಮ್ಮನ್ನು ಸ್ವಾಮಿ ಅಂತಾರೆ ಎಂದರು.
ನೀವು ಮೇಲ್ಜಾತಿಯಲ್ಲಿ ಹುಟ್ಟಿದ್ದೀರಿ ಎಂದು ಸ್ವಾಮಿ ಅಂತ ಕರೆಯುತ್ತಾರೆ. ವೆಂಕಟರಮಣಮಪ್ಪ ಅವರನ್ನು, ಎಂಪಿ ಕುಮಾರಸ್ವಾಮಿ ಅವರನ್ನು ಸ್ವಾಮಿ ಎಂದು ಕರೆಯುತ್ತಾರಾ? ಎಂದು ಪ್ರಶ್ನಿಸಿದರು. ಈ ವೇಳೆ ಎದ್ದು ನಿಂತ ಹೆಚ್ ಡಿ ರೇವಣ್ಣ, ರಮೇಶ್ ಕುಮಾರ್ ಸಾಹೇಬರನ್ನು ಸ್ವಾಮಿ ಮಾಡಬೇಡಿ, ಅವರು ಇಲ್ಲಿ ಸ್ವಲ್ಪ ಸಮಯ ಇರಬೇಕು ಎಂದರು.
ಇದಕ್ಕೆ ಸಿದ್ದರಾಮಯ್ಯ ನನ್ನನ್ನು ಯಾವತ್ತೂ ರೇವಣ್ಣ ಸಾಹೇಬ್ರು ಎಂದು ಕರೆದಿಲ್ಲ. ಸಿದ್ದರಾಮಣ್ಣ ಅಂತಾನೆ, ನಿನಗೆ ಸಾಹೇಬರು ಅಂತಾರೆ ಎಂದು ಕಾಲೆಳೆದರು. ಈ ವೇಳೆ ಮಧ್ಯೆ ಬಾಯಿ ಹಾಕಿದ ಹಾಸನ ಶಾಸಕ ಪ್ರೀತಂಗೌಡ, ರೇವಣ್ಣ ಯಾವಾಗ ಕೆಲಸ ಆಗ್ಬೇಕು ಆಗ ಸಾಹೇಬ್ರು ಅಂತಾರೆ. ಎಂಪಿ ಚುನಾವಣೆ ವೇಳೆ ಅವರು ಸಾಹೇಬ್ರು ಅಂತಿದ್ರು. ನೀವು ಮರೆತಿದ್ದೀರಿ ಎಂದು ರೇವಣ್ಣನ ಕಾಲೆಳೆದರು.
ಪ್ರೀತಂಗೌಡ ಮಾತಿಗೆ ನಕ್ಕ ಸಿದ್ದರಾಮಯ್ಯ, ನೀನು ಯಾವಾಗ ನನ್ನ ಜೊತೆಗಿದ್ಯಾ ಅವರು ಬಂದಾಗ, ರೇವಣ್ಣ ನನ್ನ ಸಂಬಂಧ ಚೆನ್ನಾಗಿದೆ. ನೀನು ಮಧ್ಯ ಪ್ರವೇಶ ಮಾಡಬೇಡ ಎಂದರು.
ಇದನ್ನೂ ಓದಿ: 2ಎ ಮೀಸಲಾತಿಯಲ್ಲಿ ಇಟ್ಟಿರುವ ಮೀಸಲಾತಿ ಯಾರಿಗೂ ಹಂಚುವುದಿಲ್ಲ: ಸಚಿವ ಶ್ರೀನಿವಾಸ ಪೂಜಾರಿ