ಬೆಳಗಾವಿ : ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಡಿಪಿಆರ್ ಅನುಮತಿ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದರು. ಸುವರ್ಣಸೌಧದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಡಿಪಿಆರ್‌ನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ಹೋರಾಟ ನಡೆಯುವ ಮುನ್ನವೇ ಮೂಗಿಗೆ ತುಪ್ಪ ಸವರಲು ಬಿಜೆಪಿ ಸರ್ಕಾರ ಹೊರಟಿದೆ. ಮಹದಾಯಿ ಯೋಜನೆಯ ಮೂಲ ಸ್ವರೂಪ ಬದಲಾಯಿಸುವುದು ಸರಿಯಲ್ಲ ಎಂದರು.
ಮಹದಾಯಿ ವಿಚಾರವಾಗಿ ಸದನದಲ್ಲಿ ಚರ್ಚಿಸಲು ಅವಕಾಶ ಕೊಟ್ಟಿಲ್ಲ. ಸಮಯದ ಅಭಾವ ಎಂದು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲು ಆಗುತ್ತಿಲ್ಲ. ಜೊತೆಗೆ ಸದನ ಮೊಟಕುಗೊಳಿಸಿದ್ದಾರೆ ಎಂದು ಟೀಕಿಸಿದರು.
ಡಿಪಿಆರ್ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಬೇಕಿತ್ತು. ಯಡಿಯೂರಪ್ಪನವರು ಹುಬ್ಬಳ್ಳಿಯಲ್ಲಿ ಮಹದಾಯಿ ಪತ್ರ ತೋರಿಸಿದಂತೆ ಈಗಲೂ ಸರ್ಕಾರ ಮೋಸ ಮಾಡುತ್ತಿದೆ. ಡಿಪಿಆರ್‌ಗೆ ಅನುಮತಿ ನೀಡಿದ್ದರೆ ಸಿಎಂ ಸದನದಲ್ಲಿ ವಿವರಿಸಬೇಕಿತ್ತು. ಆದರೆ ರಾಜಕೀಯ ಕಾರಣಕ್ಕೆ ನಮ್ಮ ಸಮಾವೇಶಕ್ಕೆ ಮೊದಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನಿಂದ ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ: ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಮಹದಾಯಿ ಜಲ-ಜನ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಹದಾಯಿ ಯೋಜನೆ ಡಿಪಿಆರ್‌ಗೆ ಕೇಂದ್ರದ ಅನುಮತಿ: ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ