ಬೆಳಗಾವಿ: ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿರುವ ಕುಂದಾನಗರಿ ಬೆಳಗಾವಿಯಲ್ಲಿ ಐಆರ್ಸಿ (ಇಂಡಿಯನ್ ರೋಡ್ ಕಾಂಗ್ರೆಸ್) ಮಾನದಂಡಗಳ ಅನ್ವಯ ಫುಟ್‍ಪಾತ್‍ಗಳನ್ನು ನಿರ್ಮಿಸಲಾಗುತ್ತಿದೆ. ಪಾದಚಾರಿಗಳಿಗೆ ಅನುಕೂಲಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಈ ಫುಟ್‍ಪಾತ್‍ಗಳು ಮಾತ್ರ ಪಾರ್ಕಿಂಗ್, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹೀಗಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪಾದಚಾರಿಗಳಿಗಾಗಿ ಫುಟ್‍ಪಾತ್‍ಗಳು:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಸಿಟಿ ಯೋಜನೆಗಳಿಗೆ ಕುಂದಾನಗರಿ ಬೆಳಗಾವಿ ಒಳಪಟ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪ್ರತಿ ವರ್ಷ ನೂರಾರು ಕೋಟಿ ರೂ. ಅನುದಾನ ನಗರಕ್ಕೆ ಹರಿದು ಬರುತ್ತಿದೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಗರೋತ್ಥಾನ ಯೋಜನೆಯಡಿ ನಗರಕ್ಕೆ 125 ಕೋಟಿ ರೂ. ಹಣ ಕಳೆದೆರಡು ವರ್ಷಗಳಿಂದ ಬಿಡುಗಡೆ ಆಗುತ್ತಿದೆ. ಹೀಗಾಗಿ ನಗರದಲ್ಲಿ ಅಗಲವಾದ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಹೈಟೆಕ್ ಉದ್ಯಾನ, ಸೈಕಲ್ ಟ್ರ್ಯಾಕ್ ಹಾಗೂ ಪಾದಚಾರಿಗಳಿಗೆ ಅನುಕೂಲವಾಗಲು ಫುಟ್‍ಪಾತ್‍ಗಳನ್ನು ನಿರ್ಮಿಸಲಾಗುತ್ತಿದೆ.
ಸಾರ್ವಜನಿಕರ ಆಕ್ರೋಶ:
ಈಗಾಗಲೇ ನಗರದ ಬಹುತೇಕ ಕಡೆಗಳಲ್ಲಿ ಫುಟ್‍ಪಾತ್‍ಗಳು ನಿರ್ಮಾಣವಾಗಿದ್ದು, ಇನ್ನು ಕೆಲವಡೆ ನಿರ್ಮಾಣ ಹಂತದಲ್ಲಿವೆ. ಆದರೆ, ಈಗಾಗಲೇ ನಿರ್ಮಾಣಗೊಂಡಿರುವ ಫುಟ್‍ಪಾತ್‍ಗಳು ಬೇರೆ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಸಂಸ್ಥೆಗಳ ಮೊಂಡುತನ!
ಮಹಾನಗರದ ಪ್ರಮುಖ ರಸ್ತೆಗಳಿಗೆ ಅಂಟಿಕೊಂಡೇ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಟಿಳಕವಾಡಿ, ಕಾಲೇಜು ರಸ್ತೆ, ಅಂಬೇಡ್ಕರ್ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಯಾವ ಸಂಸ್ಥೆಯೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿ ಪಾರ್ಕಿಂಗ್ಗಾಗಿ ರಸ್ತೆ ಪಕ್ಕದ ಸ್ಥಳವನ್ನೇ ಬಳಸಿಕೊಳ್ಳಲಾಗುತ್ತಿದೆ.
ಪಾದಚಾರಿ ಮಾರ್ಗಗಳನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ಮಹಾನಗರ ಪಾಲಿಕೆ ಹಲವು ಸಲ ನೋಟಿಸ್ ನೀಡಿದರೂ ಶಿಕ್ಷಣ ಸಂಸ್ಥೆಗಳು ಜಗ್ಗುತ್ತಿಲ್ಲ. ನಾವೇನು ಮಕ್ಕಳಿಗೆ ಬೈಕ್ ತರುವಂತೆ ಹೇಳುವುದಿಲ್ಲ. ಬೇಕಾದರೆ ಅವರ ಬೈಕ್, ವಾಹನಗಳು ಜಪ್ತಿ ಮಾಡಬಹುದು ಎನ್ನುತ್ತಿವೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳು. ಶಿಕ್ಷಣ ಸಂಸ್ಥೆಗಳ ಮೊಂಡುತನದ ವಿರುದ್ಧವೂ ಪಾಲಿಕೆ ಕಠಿಣ ಕ್ರಮ ಜರುಗಿಸುತ್ತಿಲ್ಲ. ಹೀಗಾಗಿ ಪ್ರಮುಖ ರಸ್ತೆ ಪಕ್ಕದಲ್ಲಿರುವ ಫುಟ್‍ಪಾತ್‍ಗಳು ಪಾರ್ಕಿಂಗ್ ಸ್ಫಾಟ್‍ಗಳಾಗುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮೌನ!
ಇನ್ನು ಮಹಾನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಖಡೇಬಜಾರ್ನಲ್ಲಿ ಫುಟ್‍ಪಾತ್‍ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಫುಟ್‍ಪಾತ್ ಮೇಲೆ ಸಾಗಬೇಕಾದ ಜನರು ರಸ್ತೆ ಮೇಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಪಾಲಿಕೆ ಗಮನಕ್ಕಿದ್ದು, ಆಗಾಗ ದಾಳಿ ಮಾಡುತ್ತಾರೆ. ಆದರೆ, ಪ್ರಭಾವಿಗಳ ಮೂಲಕ ವ್ಯಾಪಾರಿಗಳು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಹೀಗಾಗಿ ಫುಟ್‍ಪಾತ್‍ಗಳ ಮೇಲೆ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಪಾದಚಾರಿ ಮಾರ್ಗಗಳು ಜನರು ಓಡಾಟಕ್ಕೆ ಬಳಕೆಯಾಗದೇ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಪಘಾತಗಳ ಸಂಖ್ಯೆ ಹೆಚ್ಚಳ:
ಫುಟ್‍ಪಾತ್ ಪ್ರದೇಶಗಳ ಅತಿಕ್ರಮಣ ಹೆಚ್ಚುತ್ತಿರುವ ಕಾರಣ ನಗರದಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದೊಂದು ವರ್ಷದಲ್ಲಿ ನಗರ ಪೊಲೀಸ್ ಆಯುಕ್ತರು ನೀಡಿದ ಅಧಿಕೃತ ಮಾಹಿತಿ ಪ್ರಕಾರ 25ಕ್ಕೂ ಅಧಿಕ ಪಾದಚಾರಿಗಳು ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. 85ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಅವಳಿನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಜ್ಜು
ಪಾದಚಾರಿ ಮಾರ್ಗಗಳು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದೇ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೇ ಫುಟ್‍ಪಾತ್‍ಗಳ ತೆರವಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು ಎಂಬುವುದು ನಗರ ನಿವಾಸಿಗಳ ಆಗ್ರಹವಾಗಿದೆ.