ಬೆಳಗಾವಿ : ಹಿಂದಿನ ಯುಪಿಎ ಸರ್ಕಾರವೇ ಆಹಾರ ಭದ್ರತೆ ಯೋಜನೆ ಜಾರಿಗೊಳಿಸಿದೆ. ಅದರ ಅನ್ವಯವೇ ರಾಜ್ಯದಲ್ಲಿ ಐದು ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅಕ್ಕಿ ಕಡಿತ ನಾವು ಮಾಡಿಲ್ಲ. ಸಿದ್ದರಾಮಯ್ಯನವರೇ ಅಕ್ಕಿ ಹೆಸರಲ್ಲಿ, ಬಡವರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಆಕ್ರೋಶ ವ್ಯಕ್ತಪಡಿಸಿದರು. ಮ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಕಾರಣಕ್ಕೆ ಕೇಂದ್ರ ಸರ್ಕಾರ ಎರಡು ತಿಂಗಳು ತಲಾ ಒಬ್ಬರಿಗೆ ಐದು ಕೆಜಿ ಅಕ್ಕಿ ವಿತರಿಸುವುದಾಗಿ ಘೋಷಿಸಿದೆ. ಅದರ ಅನ್ವಯ ರಾಜ್ಯದಲ್ಲಿ ಅಕ್ಕಿ ವಿತರಣೆ ಆಗಲಿದೆ. ಅಕ್ಕಿ ವಿತರಣೆಯಲ್ಲಿ ವಿಳಂಬ ಆಗುತ್ತಿಲ್ಲ.
ಸಿದ್ದರಾಮಯ್ಯನವರು ರಾಜ್ಯ ಸರ್ಕಾರ ಅಕ್ಕಿ ವಿತರಣೆ ಕಡಿತ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಾವೇನೂ ಅಕ್ಕಿ ಕಡಿತ ಮಾಡಿಲ್ಲ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿರುವ ಆಹಾರ ಭದ್ರತೆ ಯೋಜನೆಯಂತೆ ಐದು ಕೆಜಿ ಅಕ್ಕಿ ವಿತರಿಸುತ್ತಿದ್ದೇವೆ. ಸಿದ್ದರಾಮಯ್ಯನವರು ಬಡವರ ಹೆಸರಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದರು.
ಅಕ್ಕಿ ಜೊತೆಗೆ ರಾಗಿ, ಜೋಳ ವಿತರಣೆ : ಆಹಾರ ಭದ್ರತೆ ಯೋಜನೆಯಡಿ ಅಕ್ಕಿ ಜೊತೆಗೆ ಜೋಳ ಹಾಗೂ ರಾಗಿ ನೀಡಲು ನಿರ್ಧರಿಸಿದ್ದೇವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ 2 ಕೆಜಿ ಅಕ್ಕಿ ಹಾಗೂ ಮೂರು ಕೆಜಿ ರಾಗಿ, ಉತ್ತರ ಕರ್ನಾಟಕಲ್ಲಿ 2 ಕೆಜಿ ಅಕ್ಕಿ ಹಾಗೂ ಮೂರು ಕೆಜಿ ಜೋಳ ವಿತರಿಸುವ ಯೋಜನೆ ಇದೆ.
ಈಗಾಗಲೇ ಮೈಸೂರು ಭಾಗದಲ್ಲಿ ಅಕ್ಕಿ ಜೊತೆಗೆ ರಾಗಿ ವಿತರಿಸುತ್ತಿದ್ದೇವೆ. ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೇವೆ. ಪ್ರತಿ ಟನ್ ಜೋಳಕ್ಕೆ 3500-4500 ರೂ, ಬೆಂಬಲ ಬೆಲೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಕೇಂದ್ರ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ಜೋಳ ಹಾಗೂ ರಾಗಿಯಲ್ಲಿ ಪೌಷ್ಟಿಕಾಂಶ ಪ್ರಮಾಣ ಅಕ್ಕಿಗಿಂತಲೂ ಹೆಚ್ಚಿದೆ. ಅಲ್ಲದೇ ಕಾಳಸಂತೆಯಲ್ಲಿ ಅಕ್ಕಿ ಮಾರಾಟವನ್ನು ತಡೆಯಲು ನೆರವಾಗುತ್ತದೆ. ನಮ್ಮ ರಾಜ್ಯದಲ್ಲೇ ಅಕ್ಕಿ, ಜೋಳ, ರಾಗಿ ಖರೀದಿಸಿ ಪಡಿತರದಾರರಿಗೆ ಹಂಚುತ್ತೇವೆ. ಜನರು ಅಕ್ಕಿಯನ್ನೇ ಕೊಡಬೇಕು ಎಂದರೆ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.
ಅನ್ನವಿಲ್ಲದೆ ಯಾರೂ ಸಾಯಬಾರದು : ಈಶ್ವರ ಎಂಬಾತ ನನಗೆ ಫೋನ್ ಮಾಡಿದ್ದು ನಿಜ. ಅಕ್ಕಿ ವಿತರಣೆ ಆಗುತ್ತದೆ ಎಂದು ಹೇಳಿದರೂ ಸಾಯುತ್ತೇನೆ ಎಂದ. ಸಾಯ್ತಿದ್ರೆ ಸಾಯಿ ಅಂದೆ. ಆದರೆ, ಅನ್ನವಿಲ್ಲದೇ ಯಾರೂ ಸಾಯಬಾರದು.
ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸ ಇಟ್ಟು ಒಳ್ಳೆಯ ಖಾತೆ ನೀಡಿದ್ದಾರೆ. ಬಡವರ್ಗದ ಎಲ್ಲರಿಗೂ ಅನ್ನ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಆಡು ಭಾಷೆಯಲ್ಲಿ ಮಾತನಾಡಿದ್ದೇನೆ. ಅದನ್ನೇ ವಿವಾದ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಓದಿ: ಕೋವಿಡ್ ರೋಗಿಗೆ ರೆಮ್ಡಿಸಿವಿರ್ ಔಷಧಿ ಕೊಡಿಸಿ: ಆರೋಗ್ಯಾಧಿಕಾರಿಯ ಕಾಲಿಗೆ ಬಿದ್ದು ಮಹಿಳೆಯರ ಮನವಿ