ಚಿಕ್ಕೋಡಿ: ಅರಭಾವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ನೀಡುವ ಮೂಲಕ ಈ ಕ್ಷೇತ್ರದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಇಲ್ಲಿನ ಮೂಡಲಗಿ ಪಟ್ಟಣದ ಎಲ್ಲಾ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಈ ಕ್ಷೇತ್ರದಲ್ಲಿ 34 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 77 ಗ್ರಾಮಗಳಿವೆ. ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಬಡವ-ಶ್ರೀಮಂತ ಎಂಬ ಭೇದ ಭಾವವಿಲ್ಲದೇ ಎಲ್ಲಾ ಕುಟುಂಬಗಳಿಗೆ ಸ್ವಂತ ಖರ್ಚಿನಲ್ಲಿ 76,258 ಕುಟುಂಬಗಳಿಗೆ 10 ದಿನಗಳಿಗೆ ಆಗುವಷ್ಟು ದಿನಸಿ ವಸ್ತುಗಳನ್ನು ನೀಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಶಾಸಕರ ಆದೇಶದ ಮೇರೆಗೆ ಪ್ರತಿಯೊಂದು ಗ್ರಾಮಗಳಿಗೆ ತಾಲೂಕಾಡಳಿತ ಮತ್ತು ಟೀಂ ಎನ್‍ಎಸ್‍ಎಫ್ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಬಾಲಚಂದ್ರ ಜಾರಕಿಹೊಳಿಯವರು ಕ್ಷೇತ್ರದ ಜನತೆಗೆ 2.50 ಲಕ್ಷ ಮಾಸ್ಕ್ಗಳನ್ನು ನೀಡಿದ್ದಾರೆ ಎಂದರು.
ನಗರ ಪ್ರದೇಶಗಳಲ್ಲಿರುವ ಸ್ಲಂ ಪ್ರದೇಶದ ನಿರ್ಗತಿಕ ಕುಟುಂಬಗಳಿಗೆ ಪ್ರತಿದಿನ ಒಂದು ಲೀಟರ್ನಂತೆ ಉಚಿತವಾಗಿ ನಂದಿನಿ ಹಾಲು ವಿತರಿಸುತ್ತಿದ್ದಾರೆ ಎಂದು ಹೇಳಿದರು.