ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿರುವ ನವಿಲುತೀರ್ಥ ಜಲಾಶಯ ಭರ್ತಿಯಾಗಲು 13 ಅಡಿ ಮಾತ್ರ ಬಾಕಿ ಇದೆ.
ಮಳೆ ಬಿಟ್ಟು ಬಿಡದೇ ಸುರಿಯುತ್ತಿರುವ ಕಾರಣ ಯಾವುದೇ ಕ್ಷಣದಲ್ಲಿ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮಲಪ್ರಭಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನವಿಲುತೀರ್ಥ ಜಲಾಶಯದ ಸುಪರಿಟೆಂಡಿಂಗ್ ಇಂಜಿನಿಯರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಜಲಾಶಯದ ಗರಿಷ್ಟ ಮಟ್ಟ 2079.50 ಅಡಿ ಇದ್ದು, ಇಂದಿನ ಮಟ್ಟ 2066.70 ಅಡಿಗೆ ಏರಿಕೆಯಾಗಿದೆ. ನಿರಂತರ ಮಳೆಯಿಂದ ಇಂದು ಮಲಪ್ರಭಾ ಜಲಾಶಯಕ್ಕೆ 48,821 ಕ್ಯೂಸೆಕ್ ಒಳಹರಿವು ಬಂದಿದೆ. ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ರೆ, ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಲಿದೆ.