ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ಮತ್ತು ನಿಪ್ಪಾಣಿ ತಾಲೂಕುಗಳ 80ಕ್ಕೂ ಹೆಚ್ಚು ಗ್ರಾಮಗಳು ಹಾಳು ಕೊಂಪೆಯಂತಾಗಿ, ಕೊಳೆತು ಗಬ್ಬು ವಾಸನೆ ಬೀರುತ್ತಿವೆ.
ನದಿ ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳಿಗೆ ರವದಿ, ಕಸಕಡ್ಡಿಗಳು ತಗುಲಿಕೊಂಡಿವೆ. ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಇಂಗಳಿ, ಚಂದೂರ, ಮಾಂಜರಿ, ಯಡೂರ ಸೇರಿದಂತೆ ವಿವಿಧ ನದೀತೀರದ ಭಾಗದಲ್ಲಿ ಈ ಪರಿಸ್ಥಿತಿ ಇದೆ. ಇಡೀ ರಾತ್ರಿ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ.
ಪಂಪ್ಸೆಟ್ಗಳಿಗೆ ವಿದ್ಯುತ್ ಇಲ್ಲದೆ ಜನರು ನದಿಗಳಿಗೆ ನೀರು ತರಲು ಹೋಗಬೇಕಾಗಿದೆ. ನದಿ ತೀರದ ಜನರಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಕೂಡ ತೊಂದರೆಯಾಗುತ್ತಿದೆ. ನದಿ ತೀರದಿಂದ ಸುತ್ತಮುತ್ತಲಿನ ಗ್ರಾಮಗಳು ಪೈಪ್‌ಲೈನ್ ಮೂಲಕ ಕರೆಗಳನ್ನ ಮಾಡಿಕೊಂಡು ನೀರು ಸಂಗ್ರಹ ಮಾಡಿ ಗದ್ದೆಗಳಿಗೆ ಬಿಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಪ್ರವಾಹ ಬಂದು ಲೈಟ್ ಕಂಬಗಳು, ಟಿಸಿಗಳು ಸಂಪೂರ್ಣ ಹಾಳಾಗಿವೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹೆಸ್ಕಾಂ ಅಧಿಕಾರಿಗಳು ಮಾತ್ರ ನಾಮಕಾವಸ್ತೆ ಎನ್ನುವಂತೆ ಮಂದಗತಿಯಲ್ಲಿ ಕೆಲಸ ಮಾಡ್ತಿರೋದ್ರಿಂದ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇದು ನದಿತೀರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್ ಇಲ್ಲದೇ ಬಹಳಷ್ಟು ತೊಂದರೆಗಳಾಗ್ತಿವೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ನಿರಾಶ್ರಿತರಂತೂ ಹಿಡಿಶಾಪ ಹಾಕುತ್ತಿದ್ದಾರೆ.