ಚಿಕ್ಕೋಡಿ : ಕೃಷ್ಣಾ ನದಿ ನೀರಿನಲ್ಲಿ ಮುಳುಗಡೆಯಾಗಿದ್ದ ಪರಿಣಾಮ ಗ್ರಾಮದಲ್ಲಿ ಅನೇಕ ಮನೆಗಳು ಕುಸಿದಿವೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆಯಲ್ಲಿ ಲೋಪ ಮಾಡಿದ್ದಾರೆ. ಹೀಗಾಗಿ ಸರ್ವೆ ಕಾರ್ಯವನ್ನು ಮತ್ತೆ ಮಾಡಬೇಕೆಂದು ಗ್ರಾಮ ಸಭೆಯಲ್ಲಿ ಮೂರು ಗ್ರಾಮದ ನಿರಾಶ್ರಿತರು ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ, ಶಹಾಪುರ, ಮಂಗಾವತಿ ಮೂರು ಗ್ರಾಮಗಳು ಸಂಪೂರ್ಣವಾಗಿ ನದಿ ನೀರಿನಲ್ಲಿ ಮುಳುಗಿದ್ದವು. ಈ ಹಿನ್ನೆಲೆ ಇದರ ಸಾಧಕ ಭಾದಕಗಳ ಚರ್ಚೆ ಮಾಡಲು ಜುಗೂಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮಂದಿರದ ಸಭಾ ಭವನದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಜಲಾವೃತಗೊಂಡ ಮೂರು ಗ್ರಾಮಗಳ ಕುಟುಂಬಗಳ ಪ್ರಮುಖರು ಉಂಟಾದ ನಷ್ಟದ ಬಗ್ಗೆ ವಿವರಣೆ ನೀಡಿದರು.
ಸಭೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಅನೀಲ್ ಸುಂಕೆ, ರವೀಂದ್ರ ವಾಂಟೆ, ದಾದಾ ಅಂಬಿ, ಸಚಿನ್ ಪಾಟೀಲ್, ಮಂಗಾವತಿ ಗ್ರಾಮದ ರಾಜುಗೌಡ ಪಾಟೀಲ್, ಶಂಕರ ಪಾಟೀಲ್, ಶಹಾಪುರ ಗ್ರಾಮದ ಪಟ್ಟು ಮಿಣಚೆ, ಬಿ.ಆರ್.ಜಾಧವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.