ಬೆಳಗಾವಿ: ಪ್ರವಾಹದಿಂದ ಮನೆ ಕಳೆದುಕೊಂಡ ಮಹಿಳೆಗೆ ಇದೀಗ ಮೂರು ವರ್ಷದ ಕಂದಮ್ಮನನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿರುವ ಘಟನೆ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ.
ಜಿಲ್ಲೆಯ ಗೋಕಾಕ ನಗರದ ನಿವಾಸಿ ಸುಜಾತಾ ಶಿವಾಪುರ ಅವರ ಪುತ್ರ ಸುಪ್ರಜ್ ಶಿವಾಪುರ ಇದೀಗ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ. ಎರಡು ದಿನಗಳ ಹಿಂದಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರಜ್ ಶಿವಾಪುರಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ತಿಂಗಳ ಹಿಂದೆ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತಾಳ ಪತಿ ಕೂಡ ಮೃತಪಟ್ಟಿದ್ದಾರೆ.
ಈಗ ಎರಡು ತಿಂಗಳ ಹಿಂದೆ ಪ್ರವಾಹಕ್ಕೆ ಮನೆ ಕಳೆದುಕೊಂಡಿರುವ ಸುಜಾತಾ ಮಕ್ಕಳೊಂದಿಗೆ ಶೆಡ್ ನಲ್ಲಿ ವಾಸವಾಗಿದ್ದರು. ಇದೀಗ ಎಲ್ಲವನ್ನೂ ಕಳೆದುಕೊಂಡ ಈ ಕುಟುಂಬ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಸ್ಪಂದಿಸಬೇಕಿದ್ದ ವೈದ್ಯರು ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕೆಲಹೊತ್ತು ಚಿಕಿತ್ಸೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಮಗನನ್ನು ಬದುಕಿಸಿಕೊಳ್ಳಲು ಸುಜಾತಾ ಹರಸಾಹಸ ಪಡುತ್ತಿದ್ದಾರೆ.
ಪ್ರವಾಹಕ್ಕೆ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಕೊಚ್ಚಿ ಹೋಗಿದ್ದು, ಮಗುವನ್ನು ಐಸಿಯು ನಲ್ಲಿ ಚಿಕಿತ್ಸೆ ಕೊಡಿಸೋಕೆ ಹೋದ್ರೆ ಆಸ್ಪತ್ರೆಯಲ್ಲಿ ರೇಷನ್ ಕಾರ್ಡ್ನ್ನ ಕೇಳುತ್ತಿದ್ದಾರೆ ,ಆದ್ರೆ ಹಣವಿಲ್ಲದೇ ತಾಯಿ ಪರದಾಡುತ್ತಿದ್ದಾರೆ.