ಅಥಣಿ/ಬೆಳಗಾವಿ : ಜಿಲ್ಲೆಯಲ್ಲಿ ವರುಣನ ಆರ್ಭಟ ಹಾಗೂ ಕೃಷ್ಣಾ ನದಿಯ ಅಬ್ಬರ ಮುಂದುವರೆದಿದೆ. ಗೋಕಾಕ್ ತಾಲೂಕಿನ ಅಂಕಲಗಿ ಬಳಿಯಿರುವ ಸೇತುವೆ ಮುಳುಗಡೆಯಾಗಿದೆ. ಅಥಣಿ ತಾಲೂಕಿನ ಜಮೀನುಗಳಿಗೆ ನೀರು ನುಗ್ಗಿದ್ದು, ಕೃಷ್ಣೆ ತನ್ನ ವೇಗ ಹೆಚ್ಚಿಸಿಕೊಂಡಿದೆ.
ನಿನ್ನೆ ರಾತ್ರಿ ವೇಳೆ ಕೃಷ್ಣ ನದಿಯಲ್ಲಿ 4 ಅಡಿಯಷ್ಟು ನೀರು ಹೆಚ್ಚಾದ ಪರಿಣಾಮ ಅಥಣಿ ತಾಲೂಕಿನ ನದಿ ಪಾತ್ರದ ರೈತರ ಜಮೀನುಗಳಿಗೆ ನೀರು ನುಗ್ಗಿ, ಬೆಳೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿವೆ. ಬೆಳಗಾವಿ ನಗರದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದಾಗಿ ಬಳ್ಳಾರಿ ನಾಲಾ ನೀರಿನ ಒಳಹರಿವು ಹೆಚ್ಚಳವಾಗಿದ್ದರಿಂದ ಗೋಕಾಕ್ ನಗರಕ್ಕೆ ಸಂಪರ್ಕಿಸುವ ಅಂಕಲಗಿ ಬಳಿಯ ಬಳ್ಳಾರಿ ಸೇತುವೆ ಮುಳುಗಡೆಯಾಗಿದೆ. ಉದಗಟ್ಟಿ, ಗೋಕಾಕ್ ಸೇರಿ ಇತರ ಗ್ರಾಮಗಳಿಗೆ ಸಂಪರ್ಕ ಕಡಿತದಿಂದಾಗಿ ಜನ ಪರದಾಡುವಂತಾಗಿದೆ.
ಅಥಣಿ ತಾಲೂಕಿನ ನದಿಪಾತ್ರದ 17 ಗ್ರಾಮದ ಕೆಲವು ಭೂ ಪ್ರದೇಶ ಸೇರಿ ಕೃಷಿ ಜಮೀನುಗಳಿಗೆ ನೀರು ಹರಿದ ಪರಿಣಾಮ ಮುಗಿಲೆತ್ತರಕ್ಕೆ ಬೆಳೆದ ಬಂಗಾರದಂತಹ ಕಬ್ಬು ಬೆಳೆ ಸಂಪೂರ್ಣ ಜಲಾವೃತವಾಗಿದೆ.
ಕಳೆದ ಬಾರಿಯ ಪ್ರವಾಹದಲ್ಲಿ ಲಕ್ಷಾಂತರ ಹೆಕ್ಟೇರ್ ಕಬ್ಬು ಕೊಳೆತು ಭಾರಿ ಪ್ರಮಾಣದ ನಷ್ಟ ಸಂಭವಿಸಿತ್ತು. ಇದರ ಕಹಿ ನೆನಪು ಮರೆಯುವಷ್ಟರಲ್ಲಿ ಮತ್ತೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಅವಾಂತರದಿಂದ ಶಿವಯೋಗಿಗಳ ನಾಡಿನ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದಲ್ಲಿ ಹುಲುಸಾಗಿ ಬೆಳೆದ ಮೇವು ಕೂಡ ಜಲಾವೃತಗೊಂಡು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.