ಬೆಳಗಾವಿ : ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಶ್ರೀರಾಮ ಸೇನೆ ಸಂಘಟನೆ ಮುಖಂಡರ ಮೇಲೆ ಫೈರಿಂಗ್ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ಹಿಂಡಲಗಾ ಗ್ರಾಮದ ಮರಾಠಿ ಶಾಲೆಯ ಎದುರು ನಡೆದಿದೆ. ಘಟನೆಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಕಾರು ಚಾಲಕ ಮನೋಜ್ ದೇಸೂರಕರ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಿಂದ ಕುಸಿದುಬಿದ್ದ ಮುಖಂಡರನ್ನು ಸ್ಥಳೀಯರ ನೆರವಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ನಗರದಿಂದ ಹಿಂಡಲಗಾ ಗ್ರಾಮಕ್ಕೆ ರವಿ ಅವರು ಕಾರಲ್ಲಿ ತೆರಳುವಾ ಸಂಜೆ 7.30-7.45ರ ಸುಮಾರಿಗೆ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಕಾರಲ್ಲಿ ರವಿ ಸೇರಿ ನಾಲ್ವರು ಇದ್ದರು. ದಾಳಿಯಲ್ಲಿ ರವಿ ಮತ್ತು ಕಾರು ಡ್ರೈವ್ ಮಾಡುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ರವಿ ಗದ್ದಕ್ಕೆ ಮತ್ತು ಮನೋಜ್ ದೇಸೂರಕರ ಕೈಗೆ ಗುಂಡು ತಗುಲಿದೆ. ಫೈರಿಂಗ್ಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆಗೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿದ್ದು, ಆದಷ್ಟು ಬೇಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಯಾರೂ ವದಂತಿಗಳಿಗೆ ಕಿವಿಗೊಡದೇ ಶಾಂತವಾಗಿರಬೇಕು. ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಕೈಗೊಂಡಿದ್ದೇವೆ ಎಂದು ಬೆಳಗಾವಿಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದ್ದಾರೆ.
ಗುಂಡಿನ ದಾಳಿಗೆ ಪ್ರಮೋದ ಮುತಾಲಿಕ್ ಕಿಡಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಬೆಳಗಾವಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಅವರ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ ಆಗಿದೆ. ರವಿ ಗದ್ದಕ್ಕೆ ಗುಂಡು ತಾಗಿ ಚಾಲಕನ ಕೈಗೆ ಗುಂಡು ತಾಗಿದೆ. ಬಹಳ ದೊಡ್ಡ ಪ್ರಮಾಣದ ಹಲ್ಲೆ ಇದು. ನಾನು ಇದನ್ನು ಖಂಡಿಸುತ್ತೇನೆ. ಈ ಆಟ ನಮ್ಮಲ್ಲಿ ನಡೆಯಲ್ಲ ಎಂದು ಎಚ್ಚರಿಸಿದರು.
ಹಿಂದೂಗಳಿಗೋಸ್ಕರ ಇರುವ ಸಂಘಟನೆ ನಮ್ಮದು. ನಿಮ್ಮ ಗುಂಡು, ಬಾಂಬ್ ಹಾಗೂ ಕತ್ತಿಗೆ ಹೆದರುವಂತದ್ದಲ್ಲ. ನಿಮಗೆ ಎಚ್ಚರಿಕೆ ಕೊಡ್ತೇನೆ. ಸಿಸಿಟಿವಿ ಇರಬೇಕು. ಅದನ್ನು ನೋಡಿ ಬೈಕ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ್ ಇಲಾಖೆ ಕೂಡಲೇ ಬಂಧಿಸಬೇಕು. ನಾಳೆ ನಾವು ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ಕೊಟ್ಟರು.
ಗುಂಡು ಹೊಡೆದವರಿಗೆ ತಕ್ಕ ಉತ್ತರ ಕೊಡುವುದಕ್ಕೆ ಪ್ರತಿಭಟನೆ ಮಾಡ್ತೇವೆ. ಹಿಂದೂ ಸಮಾಜ ಧೈರ್ಯದಿಂದ ಇದೆ. ನಿಮ್ಮ ಗುಂಡುಗಳಿಗೆ ಹೆದರಲ್ಲ. ಈ ರೀತಿ ಪುಂಡಾಡಿಕೆಯನ್ನು ದುಷ್ಕರ್ಮಿಗಳು ನಿಲ್ಲಿಸಬೇಕು. ನಾಳೆ ಹಿಂದೂ ಸಮಾಜೋತ್ಸವ ಬೆಳಗಾವಿ ನಡೆಯುತ್ತಿದೆ. ನಾನು ಬರುತಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಲಿದೆ. ನಿಮ್ಮ ನಾಚಿಕೆಗೇಡಿತನಕ್ಕೆ ಕಾರ್ಯಕ್ರಮದಲ್ಲಿ ಉತ್ತರ ಕೊಡುವಂತ ಸಭೆ ಮಾಡಿ ನಿಶ್ಚಯ ಮಾಡುವುದಾಗಿ ಹೇಳಿದರು.
ಕಲಬುರಗಿಯಲ್ಲಿ ಹಾಡಹಗಲೇ ಇಬ್ಬರ ಮೇಲೆ ಫೈರಿಂಗ್ : ದುಷ್ಕರ್ಮಿಗಳ ತಂಡವೊಂದು ಶನಿವಾರ ಮಧ್ಯಾಹ್ನ ಇಬ್ಬರ ಮೇಲೆ ಫೈರಿಂಗ್ ಮಾಡಿದ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ಚನ್ನವೀರ ಪಾಟೀಲ್ ಎಂಬುವರ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಹೇಳಲಾಗಿದೆ. ಚನ್ನವೀರ ಪಾಟೀಲ್ ಅವರು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ ಪಾಟೀಲ್ ಅವರ ಸಹೋದರ ಎಂದು ತಿಳಿದು ಬಂದಿದೆ. ಮತ್ತೋರ್ವ ಕಾಂಗ್ರೆಸ್ ಮುಖಂಡ ಸಂತೋಷ್ ಪಾಟೀಲ್ ದನ್ನೋರ್ ಅವರ ಸಹೋದರನ ಮೇಲೆಯೂ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಆರೋಪಗಳ ಬಂಧನ ಮೂರು ತಂಡವನ್ನು ರಚಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಹಾಡಹಗಲೇ ಫೈರಿಂಗ್: ಉದ್ಯಮಿ ಮೇಲೆ ದಾಳಿ, ಜಗಳ ನೋಡುತ್ತಿದ್ದವನ ಕಾಲು ಸೇರಿದ ಗುಂಡು