ಅಥಣಿ (ಬೆಳಗಾವಿ): ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ನಿನ್ನೆ ಬೆಳಗಾವಿಯ ಸಿಇಓ ರಾಜೇಂದ್ರ ಅವರ ನೇತೃತ್ವದಲ್ಲಿ ಅಥಣಿ ತಾಲೂಕಿನ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಲಾಗಿತ್ತು. ಕೆಲಸದಲ್ಲಿ ಲೋಪ ದೋಷಗಳು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಇಓ ರಾಜೇಂದ್ರ ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದರು.
ಇದೀಗ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮಾಸ್ಕ್ ಧರಿಸದೆ ಓಡಾಟ ಮಾಡುತ್ತಿರುವವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ. ಇವತ್ತು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪುರಸಭೆ ಸಿಬ್ಬಂದಿ ಮಾಸ್ಕ್ ಧರಿಸದ ವಾಹನ ಸವಾರರಿಗೆ 100 ರೂಪಾಯಿ ದಂಡ ವಿಧಿಸಿ ಉಚಿತವಾಗಿ ಮಾಸ್ಕ್ ನೀಡುತ್ತಿದ್ದಾರೆ. ಅದರ ಜೊತೆಗೆ ಕೊರೊನಾ ಮಹಾಮಾರಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಿನ್ನೆ ಬೆಳಗಾವಿಯ ಸಿಇಓ ರಾಜೇಂದ್ರ ಅವರ ನೇತೃತ್ವದಲ್ಲಿ ಅಥಣಿ ತಾಲೂಕಿನ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದರು. ಇವತ್ತು ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊರೊನಾ ಸೋಂಕಿಗೆ ತಡೆ ಒಡ್ಡಲು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಿದ್ದಾರೆ.