ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಬಂದು ಐದು ದಿನಗಳು ಉರಳಿದರೂ ಬೆಳಗಾವಿಯಲ್ಲಿ ಮಾತ್ರ ಬೀದಿ ಕಾಳಗ ನಿಲ್ಲುತ್ತಿಲ್ಲ. ಕ್ಷುಲ್ಲಕ ಕಾರಣಕ್ಕೆ ಗೆದ್ದ ಹಾಗೂ ಪರಾಜಿತ ಅಭ್ಯರ್ಥಿಗಳ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತುಕ್ಕಾನಟ್ಟಿ ಗ್ರಾಮದಲ್ಲಿ ಸೋತ ಹಾಗೂ ಗೆದ್ದ ಅಭ್ಯರ್ಥಿಗಳ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಪರಾಜಿತ ಅಭ್ಯರ್ಥಿ ರಾಮಪ್ಪ ಬೀದಿಯಲ್ಲಿ ಕುಡಿಯುವ ನೀರು ಬರದಂತೆ ನಳ ಬಂದ್ ಮಾಡಿದ್ದಾನೆ ಎಂದು ಗೆದ್ದ ಅಭ್ಯರ್ಥಿ ಸುನಂದಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ
ಎರಡು ಕುಟುಂಬಸ್ಥರು ದೊಣ್ಣೆಗಳಿಂದ ಬಡಿದಾಡಿಕೊಂಡು, ಪರಸ್ಪರ ಕಲ್ಲು ತೂರಾಡಿಕೊಂಡಿದ್ದಾರೆ. ಮಹಿಳೆಯರೂ ಕೂಡ ಜಡೆ ಎಳೆದುಕೊಂಡು ಹೊಡೆದಾಡಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.