ಚಿಕ್ಕೋಡಿ : ಹೆತ್ತ ಮಗಳನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದ ಪಾಪಿ ತಂದೆಗೆ 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲೆಯ ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಅಥಣಿ ತಾಲೂಕಿನ ಮಂಗಸೂಳಿ ಮಲ್ಲಾರವಾಡಿ ಗ್ರಾಮದ ಬಸವರಾಜ ಮಗದುಮ್ಮ(35) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ.
ಕಳೆದ 9 ಜೂನ್ 2016ರಲ್ಲಿ ಬಸವರಾಜ ಮಗದುಮ್ಮ ಎಂಬ ವ್ಯಕ್ತಿ ತನ್ನ ಮಗಳಾದ ಸಂಗೀತಾ ಬಸವರಾಜ ಮಗದುಮ್ಮ(7)ಳನ್ನು ಅಪ್ಪಾ ಸಾಹೇಬ ಶಿಂಧೆ ಎಂಬುವವರ ಶೆಡ್ ನಲ್ಲಿ ಯಾರೂ ಇಲ್ಲದ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದನು. ಹೆತ್ತ ಮಗಳ ಶಿಕ್ಷಣಕ್ಕೆ ಹಣಕಾಸಿನ ನೆರವಿಗೆ ಮತ್ತು ಮಗಳನ್ನು ಸಾಕಲು ಆಗುವುದಿಲ್ಲ ಎಂದು ಆರೋಪಿ ಬಾಲಕಿಯನ್ನು ಕೊಲೆ ಮಾಡಿದ್ದನು. ಈ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಥಣಿ ಸಿಪಿಐ ಎಸ್.ಎಚ್.ಶೇಖರಪ್ಪ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌಹಾಣ್ ಅವರು ಆರೋಪಿ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ಅವರು ವಾದ ಮಂಡಿಸಿದ್ದರು.
ಓದಿ : ಐಐಟಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ : ಖುಂತಿ ಎಸ್‌ಡಿಒ ವಿರುದ್ಧ ಎಫ್ಐಆರ್