ಚಿಕ್ಕೋಡಿ: ತಂದೆಯೊಬ್ಬ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಜರುಗಿದೆ. ಆರೋಪಿ ಜಿನ್ನಪ್ಪಾ ಕಾಂಜಿ ಆರೋಪಿ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದ ದುರ್ದೈವಿ. ಜಿನ್ನಪ್ಪ ಕಾಂಜಿ ಮಗನ ತಲೆಯ ಹಿಂಭಾಗಕ್ಕೆ ಹರಿತ ಆಯುಧದಿಂದ ಹೊಡೆದು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಭರತೇಶ್ ಕಾಂಜಿ ಮದ್ಯ ವ್ಯಸನಿ ಆಗಿದ್ದು ನಿತ್ಯ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ. ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡುತ್ತಿದ್ದ. ಪದೇ ಪದೇ ಜಗಳವಾಡುತ್ತಿದ್ದ. ಇವತ್ತು ಜಗಳ ತಾರಕಕ್ಕೇರಿದೆ. ಕುಪಿತಗೊಂಡ ಜಿನ್ನಪ್ಪಾ ಕೈಯಲ್ಲಿದ್ದ ಹರಿತವಾದ ಆಯುಧದಿಂದ ಭರತೇಶ್ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಭರತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆೆ. ಇನ್ನು, ಇತ್ತೀಚಿನ ಅಪರಾಧ ಪ್ರಕರಣಗಳನ್ನು ನೋಡುವುದಾದರೆ,
ಮಗನಿಗೆ ಗುಂಡಿಕ್ಕಿದ ತಂದೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಇದೇ ತಿಂಗಳು ನಡೆದಿತ್ತು. ಪುತ್ರ ನಿರೆನ್ (28) ಹತ್ಯೆಗೈದು ತಂದೆ ನಂದೇಟಿರ ಚಿಟ್ಟಿಯಪ್ಪ ಪೊಲೀಸರಿಗೆ ಶರಣಾಗಿದ್ದರು. ತಂದೆ ಮತ್ತು ಮಗ ಇಬ್ಬರೂ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಿರೆನ್ ತೋಟ ಮತ್ತು ಮನೆಗೆಲಸ ಮಾಡಿಕೊಂಡು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಇಷ್ಟೆಲ್ಲ ಕೆಲಸ ಮಾಡಿದರೂ ಅಪ್ಪ ಮಗನ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಗಲಾಟೆ ತೀವ್ರ ವಿಕೋಪಕ್ಕೆ ತಿರುಗಿದ್ದು, ತಂದೆ ನಂದೇಟಿರ ಚಿಟ್ಟಿಯಪ್ಪ ಮನೆಯಲ್ಲಿದ್ದ ಬಂದೂಕಿನಿಂದ ನಿರೆನ್ ಮೇಲೆ ಗುಂಡುಹಾರಿಸಿ ಕೊಲೆ ಮಾಡಿ, ನಂತರ ಮಡಿಕೇರಿ ಪೊಲೀಸ್ ಠಾಣೆಗೆ ಶರಣಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ತಾಯಿಯನ್ನೇ ಕೊಂದ ಮಗ: ಓದುವಾಗ ಮೊಬೈಲ್ ನೋಡುತ್ತಾ ಕುಳಿತಿದ್ದರಿಂದ ಬೈದು, ಕೆನ್ನೆಗೆ ಎರಡು ಬಾರಿಸಿದ ತಾಯಿಯನ್ನೇ ಮಗನೋರ್ವ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ಮಹರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಕೃತ್ಯದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಂತೆ ಆತ ಬಿಂಬಿಸಿದ್ದ ಎಂದು ತಿಳಿದು ಬಂದಿತ್ತು. ಪುಣೆಯ ಉರ್ಲಿ ಕಾಂಚನ್ ನಿವಾಸಿ 37 ವರ್ಷದ ತಸ್ಲೀಮ್ ಶೇಖ್ ಎಂಬ ಮಹಿಳೆ ಮಗನಿಂದ ಕೊಲೆಯಾಗಿದ್ದರು. ಆರೋಪಿ ಜಿಶಾನ್ನನ್ನು ಪೊಲೀಸರು ಬಂಧಿಸಿದ್ದರು. ಈತ 12ನೇ ತರಗತಿ ಓದುತ್ತಿದ್ದ. ತಸ್ಲೀಮ್ ಸಾವಿನ ಬಗ್ಗೆ ವೈದ್ಯರು ಮತ್ತು ಪೊಲೀಸರು ಅನುಮಾನ ವ್ಯಕ್ತಪಡಿಸಿದಾಗ ಸತ್ಯ ಬಹಿರಂಗವಾಗಿತ್ತು.
ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗ ಆಟೋ ಡಿಕ್ಕಿಯಾಗಿ ಎಎಸ್ಐ ಮಿದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ