ಅಥಣಿ: ತಾಲೂಕಿನಲ್ಲಿ ಕಬ್ಬು ಹಂಗಾಮು ಪ್ರಾರಂಭವಾದಾಗಿನಿಂದ ರೈತರು ಕಷ್ಟ ಪಟ್ಟು ಬೆಳೆದಿರುವ ಕಬ್ಬು ಸಾಗಣೆಯಿಂದ ಹದಗೆಟ್ಟ ರಸ್ತೆಗಳಿಂದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ವತಃ ರೈತರೇ ಅಥಣಿ - ಸಾವಳಗಿ ಹೆದ್ದಾರಿಯನ್ನ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಅವರ ಸ್ವಕ್ಷೇತ್ರದಲ್ಲಿ ರೈತರು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿರುವುದು ಇದು ಎರಡನೇ ಸಲವಾಗಿದೆ.
ಅಥಣಿ ಪೂರ್ವ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದೆ ಬರುತ್ತಿಲ್ಲ, ಹಲವಾರು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ರೈತರು ಹಾಗೂ ಟ್ರ್ಯಾಕ್ಟರ್ ಮಾಲೀಕರು ಜೊತೆಯಾಗಿ ರಸ್ತೆ ರಿಪೇರಿ ಮಾಡುತ್ತಿದ್ದೇವೆ. ತಾಲೂಕಿನ ಸುಟ್ಟಟ್ಟಿ ಗ್ರಾಮದಿಂದ ಯಲ್ಲಮವಾಡಿ ಗ್ರಾಮದವರಿಗೆ ಸುಮಾರು 4 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹಾಗಾಗಿ ನಾವು ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ರೈತ ರವಿ ಕರ್ಜಗಿ ಹಾಗೂ ಬಾಹುಬಲಿ ಬಸಗೌಡ ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳನ್ನ ಕೇಳಿದರೆ ಒಂದು ವಾರದಲ್ಲಿ ರಸ್ತೆ ರಿಪೇರಿ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.