ಚಿಕ್ಕೋಡಿ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಿಎಂ ಯಡಿಯೂರಪ್ಪ ಅವರು ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಸಮೀಕ್ಷೆ ನಡೆಸಿದ್ದಾರೆ. ಆದರೆ, ಅವರು ಯಾವ ರೈತರ ಜೊತೆಗೆ ಚರ್ಚಿಸದೆ ಕಾಟಾಚಾರಾಕ್ಕೆ ಪ್ರವಾಹ ಸಮೀಕ್ಷೆ ನಡೆಸಿದ್ದಾರೆ ಎಂದು ಚಿಕ್ಕೋಡಿ ಭಾಗದ ರೈತರು ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದರೆ ಮೊದಲು ಕರ್ನಾಟಕ ಪ್ರವೇಶ ಮಾಡುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಸದಲಗಾ, ಮಾಂಜರಿ, ಶಿರಗುಪ್ಪಿ. ಇಂತಹ ಸ್ಥಳಗಳಿಗೆ ಭೇಟಿ ನೀಡದೆ ಸಿಎಂ ಯಡಿಯೂರಪ್ಪ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಮುಖ್ಯಮಂತ್ರಿಗಳೆ ಕಾಟಾಚಾರಕ್ಕೆ ನಾವು ಏನೋ ಮಾಡುತ್ತಿದ್ದೇವೆ ಅನ್ನೋದನ್ನು ತೋರಿಸಬೇಡಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ. ಮತ್ತೆ ದೆಹಲಿಗೆ ಹೋಗಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಿ ತರುತ್ತೇನೆಂದು ಆಶ್ವಾಸನೆ ನೀಡಿದ್ದಾರೆ. ಆದರೆ ಅದು ಕೇವಲ ಆಶ್ವಾಸನೆ ಆಗದೆ ಪರಿಹಾರ ಹಣ ಸಂಬಂಧಪಟ್ಟ ನೆರೆ ಸಂತ್ರಸ್ತರಿಗೆ ದೊರಕಬೇಕು. ಈ ಬಾರಿ ಪ್ರವಾಹ ಉಂಟಾಗಿ ನೂರಾರು ಎಕರೆ ಬೆಳೆ ನಾಶಗೊಂಡಿದೆ.
ಇಲ್ಲಿಯವರೆ ಪಿಡಿಒ ಮತ್ತು ಅದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಯಾವುದೇ ರೈತರ ಮನೆಗಳಿಗೆ ಹೋಗಿ ಎಷ್ಟು ಹಾನಿ ಆಗಿದೆ ಎಂದು ವಿಚಾರಿಸಲು ಬಂದಿಲ್ಲ. ಕಳೆದ ಒಂದು ವರ್ಷದ ಹಿಂದಿನ ಪ್ರವಾಹದ ಪರಿಹಾರ ಇನ್ನೂ ಬಂದಿಲ್ಲ. ಕೆಲ ಮನೆಗಳ ಸರ್ವೆ ಕೂಡ ಆಗಿಲ್ಲ. ಕೆಲ ಮನೆಗಳ ಸರ್ವೆ ಆದರೂ ಪರಿಹಾರ ಬ್ಯಾಂಕ್ ಖಾತೆಗೆ ಬಂದಿರುವುದಿಲ್ಲ. ಜನರು ಕಚೇರಿಗಳಿಗೆ ಅಲೆದಾಡಿ ಬೇಸತ್ತಿದ್ದಾರೆ. ಇಷ್ಟೊಂದು ಸಮಸ್ಯೆಗಳು ಇದ್ದರೂ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸರ್ಕಾರ ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಿ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.