ಬೆಳಗಾವಿ: ನರೇಗಾ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೆ ವಿಸ್ತರಿಸುವಂತೆ ಹಾಗೂ ಶೈಕ್ಷಣಿಕ ಸಾಲ ಮನ್ನ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತರ ಬೇಸಾಯ ಪದ್ದತಿಯು ಲಾಟರಿ ವ್ಯವಸ್ಥೆಯಂತಿದ್ದು, ಇದರ ಸುಳಿಗೆ ಸಿಲುಕಿದ ರೈತರು ಉಸಿರುಗಟ್ಟಿ ಸಾಯುವ ಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆಲ್ಲಾ ನರೇಗಾ ಯೋಜನೆ ಕಾರಣವಾಗಿದೆ. ಸರ್ಕಾರದ ನರೇಗಾ ಯೋಜನೆ ಹಾಗೂ ರೈತರು ನೀಡುವ ಕೂಲಿಗೆ ಬಹಳಷ್ಟು ವ್ಯತ್ಯಾಸವಿದೆ. ರೈತರು ಕೂಲಿಗೆ ನೂರು ಕೊಟ್ಟರೆ, ನರೇಗಾ ಯೋಜನೆಯಡಿ ಮುನ್ನೂರು ರೂ. ಪಡೆಯುತ್ತಾರೆ. ಹೀಗಾಗಿ ಬಹಳಷ್ಟು ಕೂಲಿಕಾರರು ನರೇಗಾದತ್ತ ಮುಖ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ರೈತರು ನೀಡುವ ಕೂಲಿ ಹಣ ಹಾಗೂ ಸರ್ಕಾರದ ನರೇಗಾ ಯೋಜನೆಯ ಹಣ ಇವೆರಡನ್ನೂ ಕೂಲಿಕಾರರಿಗೆ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಇದರಿಂದಾಗಿ ರೈತರು ಉಳಿಮೆ ಮಾಡಲು ಸಾಧ್ಯ. ನರೇಗಾದಿಂದ ಇಂದು ಕೂಲಿಕಾರರ ಕೊರತೆ ಎದುರಾಗಿದ್ದು, ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಲೆ ದೂರಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿ ಬೀದಿ ಆಲೆದಾಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಆರಂಭದಲ್ಲಿ ಪಡೆದಿರುವ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು. ನಿರುದ್ಯೋಗ ವೇತನ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮತ್ರಿಗೆ ಮನವಿ ಸಲ್ಲಿಸಲಾಯಿತು.