ಬೆಳಗಾವಿ: ರಿಂಗ್ ರೋಡ್ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಸರ್ಕಾರ ವಶಪಡಿಸಿಕೊಂಡಿರುವ ರೈತರ ಫಲವತ್ತಾದ ಕೃಷಿ ಭೂಮಿಗೆ ಯೋಗ್ಯ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘದ ವತಿಯಿಂದ ಹಲಗ ಗ್ರಾಮದ ರೈತರು ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಮಾಡಿದ ರೈತರು, ರೈತರ ಕೃಷಿ ಭೂಮಿಯನ್ನು ಒತ್ತುವರಿ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಭೂಮಿ ಪಡೆದುಕೊಂಡರೆ ಅದಕ್ಕೆ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರೈತ ಮಹಿಳೆ ಜಯಶ್ರೀ, ರೈತ ಸಂಘಟನೆಗಳು ಹಲವಾರು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರದಿಂದ ಯಾವುದೇ ಸಹಾಯವಾಗಿಲ್ಲ. ಕಳೆದ ಹಂಗಾಮಿನ ರೈತರ ಕಬ್ಬಿನ ಬಾಕಿ ಬಿಲ್ ನೀಡಿಲ್ಲ. ಜೊತೆಗೆ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಗಳನ್ಮು ಒತ್ತುವರಿ ಮಾಡುತ್ತಿವೆ. ಇದು ಇಲ್ಲಿಗೆ ನಿಲ್ಲಬೇಕು. ಇಲ್ಲವಾದರೆ ರೈತ ಸಂಘ ಬೃಹತ್ ಹೋರಾಟ ಮಾಡಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.