ಬೆಳಗಾವಿ: ಬಾಕಿ ಉಳಿದಿರುವ ಕಬ್ಬಿನ ಬಿಲ್ ಪಾವತಿಸದ್ದಕ್ಕೆ ಕೋಪಗೊಂಡ ರೈತರು ಹಾಗೂ ರೈತ ಮುಖಂಡರು ಇಲ್ಲಿನ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ನಗರದ ಗಣೇಶಪುರ ರಸ್ತೆಯಲ್ಲಿರುವ ಸಕ್ಕರೆ ಸಂಸ್ಥೆಗೆ ಬೀಗ ಹಾಕಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮದುರ್ಗ ತಾಲೂಕಿನ ಶಿವಸಾಗರ, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್ ಕಾರ್ಖಾನೆಯಿಂದ 600ಕ್ಕೂ ಅಧಿಕ ರೈತರಿಗೆ 10 ಕೋಟಿ ರೂ. ಬಿಲ್ ಬಾಕಿ ಇದೆ. ಅಲ್ಲದೇ ಏಳು ಕಾರ್ಖಾನೆಗಳಿಂದ ಒಟ್ಟು 300 ಕೋಟಿ ರೂ. ಬಿಲ್ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
ಬಾಕಿ ಉಳಿದಿರುವ ಬಿಲ್ ಕೊಡಿಸುವಂತೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಯುಕ್ತರ ಮೊರೆ ಹೋಗಿದ್ದ ರೈತರಿಗೆ ನೋಟಿಸ್ ನೀಡಿ ಇಂದು ಮಧ್ಯಾಹ್ನ 12ಕ್ಕೆ ವಿಚಾರಣೆಗೆ ಆಗಮಿಸುವಂತೆ ಆಯುಕ್ತ ಶಿವಾನಂದ ಕಲಕೇರಿ ಆಹ್ವಾನಿಸಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ಸಕ್ಕರೆ ಸಂಸ್ಥೆ ಕಚೇರಿಗೆ ನಿಗದಿತ ಸಮಯಕ್ಕೆ ರೈತರು ಬಂದರೂ ಕಚೇರಿಗೆ ಸಕ್ಕರೆ ಆಯುಕ್ತರು ಬಂದಿರಲಿಲ್ಲ. ಸಕ್ಕರೆ ಸಂಸ್ಥೆ ಆಯುಕ್ತರು ಕಚೇರಿಗೆ ಬಾರದ ಕಾರಣಕ್ಕೆ ರೈತರು ಸಕ್ಕರೆ ಸಂಸ್ಥೆ ಎದುರು ಪ್ರತಿಭಟನೆ ನಡೆಸಿ ಕಿಡಿಕಾರಿದರು.
300 ಕೋಟಿಗೂ ಅಧಿಕ ಬಿಲ್ ಬಾಕಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ''ಜಿಲ್ಲೆಯ ಏಳು ಸಕ್ಕರೆ ಕಾರ್ಖಾನೆಗಳು 300 ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿವೆ. ಆ ಕಾರ್ಖಾನೆಗಳ ವಿರುದ್ಧ ದೂರು ದಾಖಲು ಮಾಡಿದ್ದೆವು. ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಸುಮಾರು ಬಾರಿ ವಿಚಾರಣೆ ನಡೆದು, ಇಂದು ಅದನ್ನು ಫೈನಲ್ ಮಾಡುವ ನಿಟ್ಟಿನಲ್ಲಿ ಸಕ್ಕರೆ ಸಂಸ್ಥೆ ಆಯುಕ್ತರು ರೈತರಿಗೆ ನೋಟಿಸ್ ಕೊಟ್ಟಿದ್ದರು. ಆದರೆ, ರೈತರನ್ನು ವಿಚಾರಣೆಗೆ ಕರೆದಿದ್ದ ಸಕ್ಕರೆ ಆಯುಕ್ತರೇ ಬಜೆಟ್ ಮಿಟಿಂಗ್ ನೆಪ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದಾರೆ ಎಂದರು.
ಬಿಲ್ ಕೊಡಿಸದಿದ್ದರೆ, ಉಗ್ರ ಹೋರಾಟ: ''ವಿಚಾರಣೆಗೆ ಸ್ವಂತ ಹಣ ಖರ್ಚು ಮಾಡಿ ದೂರದ ಊರುಗಳಿಂದ ರೈತರು ಇಲ್ಲಿಗೆ ಬಂದಿದ್ದಾರೆ. ಹೀಗೆ ಏಕಾಏಕಿ ವಿಚಾರಣೆ ಕ್ಯಾನ್ಸಲ್ ಮಾಡಿದ್ದರಿಂದ ನಾವು ಆಕ್ರೋಶಗೊಂಡು ಕಚೇರಿಗೆ ಬೀಗ ಜಡಿದಿದ್ದೇವೆ. ಇಲ್ಲಿ ಯಾವೊಬ್ಬ ಅಧಿಕಾರಿ ಕೂಡ ಇಲ್ಲ. ನೆಪ ಮಾತ್ರಕ್ಕೆ ಕಚೇರಿಯಿದ್ದು, ರೈತರಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ರೈತರ 300 ಕೋಟಿ ರೂ. ಬಾಕಿ ಬಿಲ್ ನೀಡಬೇಕು. ಅದೇ ರೀತಿ ಬಂದು ಹೋಗಿರುವ ರೈತರಿಗೆ ಖರ್ಚು ಕೂಡ ಕೊಡಬೇಕು. ಈ ತಿಂಗಳು 30ರಂದು ವಿಚಾರಣೆಗೆ ದಿನಾಂಕ ನಿಗದಿ ಪಡಿಸಿದ್ದು, ಡಿಸಿ, ಎಸ್ಪಿ ಅವರು ಅಂತಿಮ ಮಾಡುತ್ತೇವೆ'' ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟ ವಾಪಸ್ ಪಡೆದುಕೊಂಡಿದ್ದೇವೆ. ಆಗ ಬಿಲ್ ಕೊಡಿಸದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: HIGH COURT NEWS: ಕೊರೋನಾ ನಿರ್ಬಂಧದ ನಡುವೆ ಮೇಕೆದಾಟು ಯಾತ್ರೆ.. ಸಿಎಂ, ಡಿಸಿಎಂ ಮತ್ತಿತರರ ವಿರುದ್ಧದ ಪ್ರಕರಣ ರದ್ದು