ಅಥಣಿ (ಬೆಳಗಾವಿ) : ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸವದಿದರ್ಗಾ ಗ್ರಾಮದ ಹಿಪ್ಪರಗಿ ಬ್ಯಾರೇಜ್ ಎಡಭಾಗದಲ್ಲಿ ಕೃಷ್ಣಾ ನದಿಯ ಪ್ರವಾಹಕ್ಕೆ ಭಾರಿ ಪ್ರಮಾಣದ ಮಣ್ಣು ಕೊರೆತ ಉಂಟಾಗಿ ರೈತರ ಜಮೀನು ನೀರು ಪಾಲಾಗಿದೆ.
ಜಿಲ್ಲೆಯ ಅಥಣಿ ತಾಲೂಕಿನ ಸವದಿ ಹಾಗೂ ಜನವಾಡ ಗ್ರಾಮಕ್ಕೆ ಹೊಂದಿಕೊಂಡ ಜಮೀನುಗಳು ಸದ್ಯ ಹಿಪ್ಪರಗಿ ಬ್ಯಾರೇಜ್ ಮುಂಭಾಗದಲ್ಲಿ ಹರಿಯುತ್ತಿರುವ ನೀರಿನ ಹೊಡೆತಕ್ಕೆ ಸುಮಾರು 60 ಎಕರೆ ಪ್ರದೇಶ ಸಂಪೂರ್ಣವಾಗಿ ಕೃಷ್ಣಾ ನದಿಯ ಪಾಲಾಗಿದೆ. ಇದರಿಂದ ಜಮೀನು ಕಳೆದುಕೊಂಡು ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ಬ್ಯಾರೇಜ್ ಎಡಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲ ರಾಜಕೀಯ ನಾಯಕರು ಬಂದು ಭರವಸೆ ಮಾತ್ರ ನೀಡಿದ್ದಾರೆ. ಸದ್ಯ ನಮಗೆ ದಾಖಲೆಯಲ್ಲಿ ಜಮೀನು ಇದೆ, ಆದರೆ ವಾಸ್ತವವಾಗಿ ಜಮೀನು ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ.
ರೈತರು ಕೃಷಿ ಭೂಮಿ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ನಮಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದೇ ರೀತಿ ಸಮಸ್ಯೆ ಮುಂದುವರೆದರೆ ನಾವು ಈ ನದಿಯಲ್ಲಿ ಬಿದ್ದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸವದಿ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಆದಷ್ಟು ಬೇಗನೆ ರೈತರ ಜಮೀನುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು, ನಮ್ಮ ಜಮೀನಿನ ಮಣ್ಣನ್ನು ಮರಳಿ ತುಂಬಬೇಕು, ಇಲ್ಲವಾದರೆ ನಮಗೆ ಪರ್ಯಾಯ ಭೂಮಿ ವ್ಯವಸ್ಥೆ ಮಾಡಬೇಕು ಹಾಗೂ ಕಳೆದ 20 ವರ್ಷಗಳಿಂದ ಆದ ನಷ್ಟವನ್ನು ಸರ್ಕಾರ ನಮಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಸ್ಥಳೀಯ ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.