ಚಿಕ್ಕೋಡಿ: ತಾಲೂಕು ಹಾಗೂ ಚಿಕ್ಕೋಡಿ ಉಪ ವಿಭಾಗಗಳಾದ ಅಥಣಿ, ರಾಯಬಾಗ, ಕಾಗವಾಡ, ಹುಕ್ಕೇರಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಯೂರಿಯಾ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದು, ತಕ್ಷಣವೇ ಕೃಷಿ ಇಲಾಖೆ ಯೂರಿಯಾ ಸಿಗುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇರೂರ ಗ್ರಾಮದ ಕೃಷಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಚಿಕ್ಕೋಡಿ ತಾಲೂಕಿನಲ್ಲಿ ರಸಗೊಬ್ಬರ ಬೆಲೆ ಹೆಚ್ಚಳ ಮತ್ತು ಯೂರಿಯಾ ಕೊರತೆಯಿಂದ ರೈತರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೆಲ ರಸಗೊಬ್ಬರ ಅಂಗಡಿ ಮಾಲೀಕರು ಯೂರಿಯಾ ಇದ್ದರೂ ನೀಡುತ್ತಿಲ್ಲ. ಅಲ್ಲದೇ ಸರ್ಕಾರ ನಿಗದಿಪಡಿಸಿದ ಬೆಲೆಗೆ ಕೊಡದೆ ಹೆಚ್ಚಿನ ಸಂಖ್ಯೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ.
ಸರ್ಕಾರ ಈ ಕೂಡಲೇ ರೈತರಿಗೆ ಯೂರಿಯಾ ಸಿಗುವ ವ್ಯವಸ್ಥೆ ಮಾಡಬೇಕು ಮತ್ತು ಹೆಚ್ವಿನ ದರಗಳಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವ ರಸಗೊಬ್ಬರಗಳ ಅಂಗಡಿ ಮಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.