ಬೆಳಗಾವಿ: ನೆರೆಯಿಂದ ಉತ್ತರ ಕರ್ನಾಟಕ ತತ್ತರಿಸಿದರೂ ಪರಿಹಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಪ್ರಧಾನಿ ಮೇಲೆ ಒತ್ತಡ ಹೇರಲು ಆಗದಿದ್ದರೆ ರಾಜ್ಯದ 25 ಬಿಜೆಪಿ ಸಂಸದರು ರಾಜೀನಾಮೆ ನೀಡಿ ಹೊರ ಬರಬೇಕು ಎಂದು ರೈತ ಮಹಿಳೆ ಜಯಶ್ರೀ ಗುರೆನ್ನವರ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎರಡು ಸಲ ಭೇಟಿ ನೀಡಿ ಹೋಗಿದ್ದಾರೆ. ಪರಿಹಾರ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ರೂ. ನೀಡುವಂತೆ ಸಾರ್ವಜನಿಕ ಸಭೆಯಲ್ಲಿ ಸಿಎಂ ಕೋರಿದ್ದರು. ಆದರೂ ಪ್ರಧಾನಿ ಪರಿಹಾರ ಹಾಗೂ ವಿಶೇಷ ಅನುದಾನದ ಬಗ್ಗೆ ತುಟಿ ಬಿಚ್ಚಲಿಲ್ಲ. ಬಿಜೆಪಿಯ 25 ಸಂಸದರು ಗೆದ್ದು ದೆಹಲಿಗೆ ಹೋದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಈ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ಜ. 13ರಂದು ಎಲ್ಲಾ ರೈತ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಮಹದಾಯಿ ಯೋಜನೆ ಜಾರಿ, ತೊಗರಿ ಸೇರಿದಂತೆ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಲ್ ಪಾವತಿಸುವುದು ಸೇರಿದಂತೆ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ರಾಜ್ಯದ ಎಲ್ಲಾ ಕಡೆಯಿಂದ 1 ಲಕ್ಷ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.