ಚಿಕ್ಕೋಡಿ: ಮುಂಗಾರಿನ ಫಸಲು ರೈತನ ಮನೆ ತುಂಬುವ ಕಾಲವಿದು. ಜೋಳ, ಗೋವಿನ ಜೋಳ, ಸಜ್ಜೆ, ಹೆಸರು, ಸೂರ‍್ಯಕಾಂತಿ, ರಾಗಿ, ಭತ್ತ ಹೀಗೆ ಅನೇಕ ಧಾನ್ಯಗಳ ರಾಶಿ ಮಾಡುವ ಕಾಲ. ರಾಶಿಯ ಸಂಭ್ರಮದೊಂದಿಗೆ ಚಳಿಗಾಲವನ್ನು ಸ್ವಾಗತಿಸುವ ಸಂಕ್ರಮಣದ ಕಾಲವೂ ಹೌದು. ಉತ್ತರ ಕರ್ನಾಟಕದಲ್ಲಿ ರೈತರು ಮಸಾರಿ (ಕೆಂಪು) ಮಣ್ಣಿನಲ್ಲಿ ಮುಂಗಾರು ಫಸಲು ಸಂಪೂರ್ಣವಾಗಿ ಬಂದಾಗ ಸೀಗೆ ಹುಣ್ಣಿಮೆ ಮತ್ತು ಹಿಂಗಾರು (ಕಪ್ಪು) ಮಣ್ಣಿನಲ್ಲಿ ಬೆಳೆಯ ಫಸಲು ಬಂದಾಗ ಎಳ್ಳಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸುವರು.
ಸೀಗೆ ಹುಣ್ಣಿಮೆಯ ದಿನದಂದು ಹೊಲದಲ್ಲಿದ್ದ ಕಲ್ಲುಗಳನ್ನು ಆರಿಸಿಕೊಂಡು ಬನ್ನಿಗಿಡದ ಮುಂದೆ ಐದು ಕಲ್ಲು, ಹಿಂದೆ ಒಂದು ಕಲ್ಲು ಇಟ್ಟು ಕುಂಕುಮ ವಿಭೂತಿ ಹಚ್ಚಿ ಪೂಜಿಸುವರು. ಮುಂದೆ ಪೂಜಿಸಿದ ಕಲ್ಲು ಪಂಚ ಪಾಂಡವರ ಮತ್ತು ಹಿಂದೆ ಪೂಜಿಸಿದ ಕಲ್ಲು ಕರ್ಣನದೆಂದು ರೈತರು ಹೇಳುವರು.
ಸಿಹಿ ಪದಾರ್ಥವಾದ ಹೋಳಿಗೆ, ಕರಿ ಗಡಬು, ಎಣ್ಣೆಯ ಹೋಳಿಗೆ, ಕರಚೆ ಕಾಯಿ, ಸುರಳಿ ಹೋಳಿಗೆ, ಶೇಂಗಾ ಹೋಳಿಗೆ ಒಂದು ವಾರದ ಮುಂಚೆಯೇ ಮಾಡುವರು. ಜೋಳದ ಮತ್ತು ಸಜ್ಜೆಯ ಚಿಕ್ಕ ಚಿಕ್ಕ ಕಡಬು, ಪುಂಡಿಯ ಪಲ್ಲೆ, ಬದನೆಕಾಯಿ, ಚವಳೆಕಾಯಿ, ಮೆಣಸಿನ ಕಾಯಿ ಪಲ್ಲೆ, ಕಡಕ ಸಜ್ಜೆ, ಜೋಳದ ರೊಟ್ಟಿ, ಮತ್ತು ವಿವಿಧ ಬಗೆಯ ಚಟ್ನಿಯನ್ನು ತಯಾರಿಸುವರು. ಸೀಗೆ ಹುಣ್ಣಿಮೆ ದಿನದಂದು ಚರಗ ಚೆಲ್ಲಿದ ನಂತರ ಹೊಲದಲ್ಲಿ ಕುಟುಂಬ ವರ್ಗದವರು ಮತ್ತು ಪಕ್ಕದ ಮನೆಯವರು ಸೇರಿಕೊಂಡು ಸಂಭ್ರಮದಿಂದ ಊಟವನ್ನು ಸವಿಯುವರು. ಆದರೆ, ಈ ಬಾರಿ ಕೊರೊನಾ ರೋಗ ಬಂದ ಹಿನ್ನೆಲೆಯಲ್ಲಿ ಈ ಬಾರಿ ರೈತರು ಅಷ್ಟೊಂದು ವಿಜೃಂಭಣೆಯಿಂದ ಆಚರಿಸಿಲ್ಲ.
ಇದು ಪೂರ್ವಜರಿಂದ ಬಂದ ಹಬ್ಬವಾಗಿದ್ದು ಹಿರಿಯರು ಮಾಡಿಕೊಂಡು ಬಂದ ರೂಢಿ. ಕಲಿಯುಗದಲ್ಲೂ ಸಹಿತ ರೈತರು ಸೀಗೆ ಹುಣ್ಣಿಮೆ ಆಚರಿಸುವುದು ವಿಶೇಷವಾಗಿದೆ. ಈ ಹಬ್ಬಗಳು ಈಗ ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದುಕೊಂಡಿದೆ.
ಇನ್ನು ಸೀಗೆ ಹುಣ್ಣಿಮೆ ದಿನದಂದು ಸುತ್ತ ಮುತ್ತಲಿನ ಮನೆಯವರನ್ನು ಕರೆದುಕೊಂಡು ಹೋಗಿ ಊಟ ಮಾಡಿ ಜಮೀನು ಸುತ್ತಾಡಿ ಬರುತ್ತಾರೆ. ಈ ಬಾರಿ ಮಾಹಾಮಾರಿ ಕೊರೊನಾದಿಂದ ರೈತರು ಕೂಡಾ ಸಾಧಾರಣವಾಗಿ ಸೀಗೆ ಹುಣ್ಣಿಮೆ ಆಚರಿಸಿದ್ದಾರೆ.