ಚಿಕ್ಕೋಡಿ : ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡದಲ್ಲಿ ನಡೆದಿದೆ.
ಅರ್ಜುನವಾಡದ ರೈತ ಶಿವಾನಂದ ಬಾಳಪ್ಪ ಕೋಳಿ (33) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ಕೃಷಿಗಾಗಿ ಗ್ರಾಮದ ವರಲಕ್ಷ್ಮಿ ಬ್ಯಾಂಕ್ನಿಂದ 80 ಸಾವಿರ, ತನ್ನ ತಾಯಿಯ ಹೆಸರಿನಲ್ಲಿ ಪಿಕೆಪಿಎಸ್ ಸಂಘದಲ್ಲಿ 36 ಸಾವಿರ ಮತ್ತು ತಮ್ಮ ಸಾತಪ್ಪ ಕೋಳಿ ಹೆಸರಿನಲ್ಲಿ 36 ಸಾವಿರ ಸೇರಿ ಒಟ್ಟು 1.52 ಲಕ್ಷ ಸಾಲ ಮಾಡಿಕೊಂಡಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.