ಬೆಳಗಾವಿ: ಇಂದು ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ 47 ನೇ ಹುಟ್ಟುಹಬ್ಬ. ಇನ್ನೊಂದೆಡೆ ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಬಿಡುಗಡೆಯಾಗಿದೆ. ಈ ಹಿನ್ನೆಲೆ ನೆಚ್ಚಿನ ನಟನ ಜನ್ಮ ದಿನವನ್ನ ಬೆಳಗಾವಿಯ ಅಭಿಮಾನಿಯೊಬ್ಬ ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಇಲ್ಲಿನ ಚಿತ್ರಮಂದಿರದಲ್ಲಿ 17 ನಂಬರ್ ಸೀಟ್ ಮೇಲೆ ಅಪ್ಪು ಫೋಟೋ ಇಟ್ಟು, ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಈ ವೇಳೆ, ಸಂತಸ ಹಂಚಿಕೊಂಡ ಅಭಿಮಾನಿ, ಅಪ್ಪು ನಮ್ಮ ಜೊತೆಗಿದ್ದಾರೆ, ಅವರ ಜೊತೆಗೆ ನಾವು ಚಿತ್ರ ವೀಕ್ಷಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದೆಡೆ, ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲ ಎಂಬ ನೋವು ಅಭಿಮಾನಿಗಳ ಹೃದಯ ಹಿಂಡಿ ಹಿಪ್ಪೆ ಮಾಡುತ್ತಿದೆ. ಇನ್ನೊಂದೆಡೆ 'ಜೇಮ್ಸ್' ಸಿನಿಮಾ ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು 'ಅಪ್ಪು' ಅಭಿನಯಕ್ಕೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಿದ್ದಾರೆ.