ಬೆಳಗಾವಿ: ಬೆಂಗಳೂರಿನ ಖಾಸಗಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿ ಆತಂಕಕ್ಕೆ ಕಾರಣವಾಗಿದ್ದ ಬೆಳಗಾವಿಯ ಯುವತಿಯ ಮನೆಗೆ ಬೆಂಗಳೂರು ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಯುವತಿಯೊಬ್ಬರು ತನ್ನ ತಾಯಿಯ ಮೊಬೈಲ್ನಿಂದ ಬೆಂಗಳೂರಿನ ಟಿಸಿಎಸ್ ಕಂಪನಿಯ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಇಂದು ಸಂಜೆ ಬೆಳಗಾವಿಗೆ ಆಗಮಿಸಿದ್ದರು. ಯುವತಿ ಮತ್ತು ಅವರ ಪೋಷಕರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು.
ಯುವತಿ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಉನ್ನತ ವ್ಯಾಸಂಗದ ಸಂಬಂಧ ಕೆಲಸ ಬಿಟ್ಟಿದ್ದರು. ವ್ಯಾಸಂಗ ಮುಗಿಸಿದ ಬಳಿಕ ಕಂಪನಿಯವರು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ಯುವತಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರ ಸಹಾಯದಿಂದ ಯುವತಿಯನ್ನ ವಿಚಾರಿಸಿ, ಹೆಚ್ಚಿನ ವಿಚಾರಣೆಗೆ ಪೋಷಕರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಗೆ ಬರುವಂತೆ ಅವರಿಗೆ ಬೆಂಗಳೂರು ಪೊಲೀಸರು ನೊಟೀಸ್ ಕೂಡ ಕೊಟ್ಟಿದ್ದಾರೆ. ಬಳಿಕ ಬೆಳಗಾವಿಯಿಂದ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಹುಸಿ ಬಾಂಬ್ ಕರೆ: ಕಂಪನಿಯನ್ನು ಬೆಚ್ಚಿಬೀಳಿಸಿದ ಮಹಿಳಾ ಮಾಜಿ ಉದ್ಯೋಗಿ!