ಬೆಳಗಾವಿ: ಜ್ಯೋತಿಷ್ಯ ಪಂಡಿತ ಎಂದು ಹೇಳಿಕೊಂಡು ಮಹಿಳೆಯನ್ನು ವಂಚಿಸಿದ್ದ ಡೋಂಗಿ ಜ್ಯೋತಿಷಿಯನ್ನು ಬೆಳಗಾವಿಯ ಎಪಿಎಂಸಿ ಪೊಲೀಸರು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಬಂಧಿಸಿದ್ದಾರೆ.
ರಾಯಚೂರು ಮೂಲದ ವಿಜಯಕುಮಾರ ಸುಗತೆ (40) ಬಂಧಿತ ಆರೋಪಿ. ಈತನ ಬಗ್ಗೆ ಕರಪತ್ರದಲ್ಲಿ ಮುದ್ರಿತವಾಗಿದ್ದನ್ನು ನೋಡಿ ಬೆಳಗಾವಿ ನಗರದ ಗೃಹಿಣಿ ಈತನ ಮುಂದೆ ನೋವು ತೋಡಿಕೊಂಡಿದ್ದರು. ಮಹಿಳೆ ಪತಿ ತನ್ನಿಂದ ದೂರವಾಗಿದನ್ನು ತಿಳಿಸಿದ್ದನೇ ಬಂಡವಾಳವಾಗಿಸಿಕೊಂಡ ಡೋಂಗಿ ಜ್ಯೋತಿಷಿ ಮಹಿಳೆಯ ವಂಚನೆಗೆ ಮುಂದಾಗಿದ್ದ. ಈತ ತಾನು ಚಾಮರಾಜನಗರ ಕೊಳ್ಳೆಗಾಲದ ಶ್ರೀ ಸಾಯಿ ದುರ್ಗಾದೇವಿ ಜ್ಯೋತಿಷ್ಯಂ ಪಂಡಿತ ವಿ.ಆರ್. ಗುರೂಜಿ ಎಂದು ಸುಳ್ಳು ವಿವರ ನೀಡಿ ಮಹಿಳೆಯನ್ನು ನಂಬಿಸಿದ್ದಾನೆ. ಅಲ್ಲದೇ ಆ ಮಹಿಳೆಯಿಂದ ಪೂಜೆ ಹಾಗೂ ಇತ್ಯಾದಿಗಳಿಗಾಗಿ ಹಂತ ಹಂತವಾಗಿ 2.60 ಲಕ್ಷ ರೂಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ.
ಹಣ ಪಡೆದ ಬಳಿಕ ಡೋಂಗಿ ಜ್ಯೋತಿಷಿಯ ಪತ್ತೆ ಇರಲಿಲ್ಲ. ಇದನ್ನರಿತ ಮಹಿಳೆ ಈತ ಸುಳ್ಳು ಹೇಳಿ ಮೋಸ ಮಾಡಿದ್ದಾನೆ ಎಂದು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆತನ ಬ್ಯಾಂಕ್ ಖಾತೆ ಹಾಗೂ ಕರಪತ್ರದ ಜಾಡು ಹಿಡಿದ ಎಪಿಎಂಸಿ ಠಾಣೆಯ ಪೊಲೀಸರು ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಜೋತಿಷ್ಯಿಯನ್ನು ಬಂಧಿಸಿದ್ದಾರೆ. ಈತನಿಂದ 1.30 ಲಕ್ಷ ರೂ. ನಗದು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.