ಬೆಳಗಾವಿ: ವೀಸಾ ನಿಯಮ ಉಲ್ಲಂಘಿಸಿದ ಆರೋಪದಡಿ ಇಂಡೋನೇಷ್ಯಾ ಮೂಲದ 10 ಮುಸ್ಲಿಂ ಧರ್ಮಗುರುಗಳ ವಿರುದ್ಧ ನಗರದ ಮಾಳಮಾರುತಿ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 2ರಂದು ಭಾರತಕ್ಕೆ ಆಗಮಿಸಿದ್ದ ಇಂಡೋನೇಷ್ಯಾ ಮೂಲದ ಮುಸ್ಲಿಂ ಧರ್ಮ ಗುರುಗಳು ಮಾರ್ಚ್ 8ರವರೆಗೂ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾರ್ಚ್ 9ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಬೆಳಗಾವಿಗೆ ಆಗಮಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು.
ಭಾರತ ದೇಶದ ಐತಿಹಾಸಿಕ, ಪ್ರವಾಸಿತಾಣಗಳ ರಕ್ಷಣೆ ಮಾಡುವುದಾಗಿ ಹೇಳಿ ವೀಸಾ ಪಡೆದಿರುವ ಹತ್ತು ಜನರೂ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಧಾರ್ಮಿಕ ಸಭೆಯಲ್ಲಿ ಭಾಗಿಯಾಗುವ ಮೂಲಕ ವೀಸಾ ನಿಯಮ ಉಲ್ಲಂಘಿಸಿದ ಹತ್ತು ಜನ ವಿದೇಶಿಗರ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಈ ಎಲ್ಲರ ಪಾಸ್‌ಪೋರ್ಟ್ ಜಪ್ತಿ ಮಾಡಿಕೊಳ್ಳಲಾಗಿದ್ದು, ಸದ್ಯ ಮಸೀದಿಯೊಂದರಲ್ಲಿ 10 ವಿದೇಶಿಗರಿಗೆ ಸಾಮೂಹಿಕ ಕ್ವಾರಂಟೈನ್ ನಲ್ಲಿರಿಸಿ ನಿಗಾ ವಹಿಸಲಾಗಿದೆ.