ಬೆಳಗಾವಿ : ವಿವಾಹವಾದ ನಂತರವೂ ಅನೈತಿಕ ಸಂಬಂಧ ಮುಂದುವರೆಸಿಕೊಂಡು ಹೊರಟ್ಟಿದ್ದ ಜೋಡಿಯೊಂದು ತಮ್ಮ ಗುಟ್ಟು ರಟ್ಟಾಗುತ್ತಿದ್ದಂತೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಬೆನ್ನಾಳಿ ಗ್ರಾಮದಲ್ಲಿ ನಡೆದಿದೆ.
ಶಿವಾಜಿ ಗಾಡಿವಡ್ಡರ (31) ಹಾಗೂ 35 ವರ್ಷ ವಯಸ್ಸಿನ ಮಮತ (ಹೆಸರು ಬದಲಿಸಿದೆ) ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರ ಮನೆಗಳು ಒಂದೇ ಕಾಲೋನಿಯಲ್ಲಿದ್ದವು. ಮೊದಲಿನಿಂದಲೂ ಇಬ್ಬರೂ ಸಂಬಂಧ ಹೊಂದಿದ್ದರಂತೆ. ಅಲ್ಲದೇ ಈ ಇಬ್ಬರು ದೂರದ ಸಂಬಂಧಿಗಳು ಆಗಬೇಕು. ಕಾರಣಾಂತರಗಳಿಂದ ಇಬ್ಬರೂ ಬೇರೆ ಬೇರೆಯವರನ್ನು ಮದುವೆ ಆಗಿದ್ದರು.
ಮೃತ ಶಿವಾಜಿಗೆ ಇಬ್ಬರು ಮಕ್ಕಳಿದ್ದು, ಮೃತಳಿಗೆ ಮೂವರು ಮಕ್ಕಳಿದ್ದಾರೆ. ಅಚ್ಚರಿ ಅಂದ್ರೆ ಆಕೆಯ ಹಿರಿಯ ಪುತ್ರಿಯ ವಿವಾಹವೂ ಆಗಿದೆ. ಹೀಗಿದ್ದರೂ ಮದುವೆ ನಂತರವೂ ಶಿವಾಜಿ ಹಾಗೂ ಮಮತ (ಹೆಸರು ಬದಲಿಸಿದೆ) ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಉಭಯ ಕುಟುಂಬಸ್ಥರಿಗೆ ಗೊತ್ತಾದಾಗ ಇಬ್ಬರನ್ನು ಕೂರಿಸಿ ಬುದ್ಧಿವಾದ ಹೇಳಿದ್ದರು.
ಆದರೂ ಹಿರಿಯರ ಮಾತು ಧಿಕ್ಕರಿಸಿ ಈ ಇಬ್ಬರೂ ಅನೈತಿಕ ಸಂಬಂಧ ಮುಂದುವರೆಸಿದ್ದರು. ಅಲ್ಲದೇ ಇಡೀ ದಿನ ಇಬ್ಬರೂ ಹೊರಗೆ ಸುತ್ತಾಡೋದು ಹೆಚ್ಚು ಮಾಡಿದ್ದರಿಂದ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೃತಳ ಪತಿ ಹಾಗೂ ಶಿವಾಜಿ ಪತ್ನಿ ಕುಟುಂಬಸ್ಥರ ಜತೆಗೆ ಗ್ರಾಮಸ್ಥರ ಗಮನಕ್ಕೂ ತಂದಿದ್ದರು. ಗ್ರಾಮಸ್ಥರು ಇಬ್ಬರನ್ನು ಕರೆದು ಬುದ್ಧಿ ಹೇಳಿ, ಸಂಬಂಧ ಕಡಿತಗೊಳಿಸುವಂತೆ ತಾಕೀತು ಮಾಡಿದ್ದರು.
ಇದರಿಂದ ಮನನೊಂದು ಬೆಳಗಾವಿ ತಾಲೂಕಿನ ಜ್ಯೋಗ್ಯಾನಟ್ಟಿ ಗ್ರಾಮದ ಮರವೊಂದಕ್ಕೆ ನೇಣು ಬಿಗಿದುಕೊಂಡು ಶಿವಾಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿದ ತಕ್ಷಣವೇ ಅವನ ಪ್ರೇಯಸಿ ಮಮತಾ (ಹೆಸರು ಬದಲಿಸಿದೆ) ಕೂಡ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಹುಡುಗನ ತಂದೆ ಹಾಗೂ ಮೃತಳ ಪತಿ ದೂರು ದಾಖಲಿಸಿದ್ದಾರೆ.