ಬೆಳಗಾವಿ: ಸದ್ಯದಲ್ಲೆ ಖಾಲಿಯಿರುವ ನಾಲ್ಕು ಸಚಿವ ಸ್ಥಾನಗಳಿಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಸುಳಿವು ಸಿಕ್ಕ ನಾಯಕರು ನಾನಾ ಟ್ರಿಕ್ಸ್ ಮಾಡುತ್ತಾ ಹೈಕಮಾಂಡ್ ನಾಯಕರ ಗಮನ ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆಯ ಇಬ್ಬರು ಪಾಟೀಲ್ ಶಾಸಕರು ಸಚಿವ ಸ್ಥಾನಕ್ಕಾಗಿ ಕರಸತ್ತು ನಡೆಸಿದ್ದಾರೆ.
ಮುನ್ನೆಲೆಗೆ ಬಂದ ಮರಾಠಾ ಹೋರಾಟ:
ಮರಾಠಾ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮತ್ತೆ ಮರಾಠಾ ಸಮುದಾಯ ಬೀದಿಗಿಳಿದಿದೆ. ಮೀಸಲಾತಿ ಜೊತೆಗೆ ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಮೂರು ವರ್ಷಗಳಿಂದ ಸೈಲೆಂಟ್ ಆಗಿದ್ದ ಮರಾಠಾ ಮೀಸಲು ಹೋರಾಟ ಮತ್ತೆ ಮುನ್ನಲೆಗೆ ಬಂದಿದೆ.
ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಶಾಸಕಿ ಆಗ್ರಹ:
ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸತೀಶ್ ಅಣ್ಣಾ ಕಲ್ಯಾಣ ಮಂಟಪದಲ್ಲಿ ಮರಾಠಾ ಕ್ರಾಂತಿ ಮೌನ ಮೋರ್ಚಾದಿಂದ ರಾಜ್ಯಮಟ್ಟದ ಮರಾಠಾ ಸಮಾಜದ ಚಿಂತನಾ ಸಭೆ ಕರೆಯಲಾಗಿತ್ತು. ಈ ಸಭೆಗೆ ಮಾಜಿ ಸಚಿವ ಶ್ರೀಮಂತ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ಹೊರತುಪಡಿಸಿ ಉಳಿದೆಲ್ಲ ಮರಾಠಾ ಸಮುದಾಯದ ರಾಜಕೀಯ ನಾಯಕರು ಗೈರಾಗಿದ್ದರು.
ಚಿಂತನಾ ಸಭೆಯಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ವಿಚಾರಕ್ಕಿಂತ ಹೆಚ್ಚಾಗಿ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಚರ್ಚೆಯೇ ಜೋರಾಗಿತ್ತು. ಶಾಸಕಿ ಆಗಿರುವ ಅಂಜಲಿ ನಿಂಬಾಳ್ಕರ್ ಸಹ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾಲೆಳೆದರು.
ಪಾಟೀಲ್ ವಿಶ್ವಾಸ:
ಈ ಕುರಿತು ಮಾತನಾಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ್, ತಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಸಿಗಬೇಕು ಎಂದು ಸಮುದಾಯದವರು ಒತ್ತಾಯಿಸುವುದು ಸಹಜ. ಮರಾಠಾ ಸಮುದಾಯ ಅಷ್ಟೇ ಅಲ್ಲ ಜೈನ್, ಮುಸ್ಲಿಂ ಸೇರಿ ವಿವಿಧ ಸಮುದಾಯದವರು ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಕೊಡ್ತಾರೆ ಎಂಬ ಭರವಸೆ ನೀಡಿದ್ದು, ಈ ಕುರಿತು ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಅಭಯ್ ಪಾಟೀಲ್ ಕಸರತ್ತು:
ಒಂದು ಕಡೆ ಶ್ರೀಮಂತ ಪಾಟೀಲ್ ಸಮುದಾಯದವರ ಮೂಲಕ ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ. ಇತ್ತ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಗೆದ್ದಿರುವುದನ್ನೇ ಮುಂದಿಟ್ಟುಕೊಂಡು ಶಾಸಕ ಅಭಯ್ ಪಾಟೀಲ್ ಸಿಎಂ ಹಾಗೂ ರಾಜ್ಯಾಧ್ಯಕ್ಷರ ಮೇಲೆ ಒತ್ತಡ ಹೆರಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.
ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಇಂದು ವಿವಿಧ ಸಂಘ ಸಂಸ್ಥೆಗಳ ಜೊತೆಗೆ ನೂತನ ಬಿಜೆಪಿ ಪಾಲಿಕೆ ಸದಸ್ಯರು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ, ಮಹಾನಗರ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು. ಮತ್ತೊಂದೆಡೆ ಬೆಳಗಾವಿ ಪಾಲಿಕೆ ಚುನಾವಣೆಯ ಬಿಜೆಪಿ ಉಸ್ತುವಾರಿ ವಹಿಸಿದ್ದ ಅಭಯ್ ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕೆಂದು ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಕಾರ್ಯದರ್ಶಿ, ವಿಧಾನಸಭೆ ಮುಖ್ಯ ಸಚೇತಕ ಸ್ಥಾನ ಕೊಟ್ರೆ ಒಪ್ಪೋದಿಲ್ಲ: ಅಭಯ್ ಪಾಟೀಲ್
ಅಭಯ್ ಪಾಟೀಲ್ ಐದು ಬಾರಿ ಚುನಾವಣೆ ಸ್ಪರ್ಧಿಸಿ ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಪಾಲಿಕೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಲು ಕಾರಣಿಭೂತರಾಗಿದ್ದಾರೆ. ಇವರಿಗೆ ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಅಭಯ್ ಪಾಟೀಲ್ ತಾವು ಸಿಎಂ ರಾಜಕೀಯ ಕಾರ್ಯದರ್ಶಿ ಅಥವಾ ಸರ್ಕಾರದ ಮುಖ್ಯ ಸಚೇತಕ ಕೊಟ್ರೇ ತಗೊಳ್ಳಲ್ಲ ಅನ್ನುವ ಮೂಲಕ ತಾವು ಸಚಿವಾಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ.
ಇನ್ನೂ ನಾಳೆ ಅಧಿವೇಶನದ ಬಳಿಕ ಶಾಸಕ ಅಭಯ್ ಪಾಟೀಲ್ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದೆ ನೂತನ ಪಾಲಿಕೆ ಸದಸ್ಯರ ಪರೇಡ್ ಮಾಡಿಸುವುದರ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಮೋದಿ ಕೆಲಸ ಮೆಚ್ಚಿ ನಾನೇ ಬಿಜೆಪಿಗೆ ಹೋದೆ, ನನಗ್ಯಾರೂ ಹಣದ ಆಫರ್ ಮಾಡಿರಲಿಲ್ಲ: ಶ್ರೀಮಂತ ಪಾಟೀಲ್