ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಬೇಕು ಎಂಬುದು ಕನ್ನಡಿಗರು ಹಾಗೂ ರಾಯಣ್ಣ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಯಣ್ಣ ಅಭಿಮಾನಿಗಳು, ಕರವೇ ಸೇರಿದಂತೆ ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ಮಧ್ಯರಾತ್ರಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡನಟ್ಟಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯಣ್ಣ ಮೂರ್ತಿ ಪ್ರತಿಷ್ಟಾಪನೆ ವಿಚಾರದಲ್ಲಿ ಎಂಇಎಸ್ನ ಕೆಲ ಕಾರ್ಯಕರ್ತರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಗಲಾಟೆ ಮಾಡುವ ಮೂಲಕ ಕಾನೂನು ವ್ಯವಸ್ಥೆಗೆ ಧಕ್ಕೆ ತರಲು ಹೊರಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.