ಬೆಳಗಾವಿ: ನಗರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಕಂಗ್ರಾಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ನಡೆದ 6ನೇ ತಂಡದ ಮೀಸಲು ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೆಎಸ್ಆರ್ಪಿ, ಐಟಿಬಿಪಿ, ಸಿಐಎಸ್ಎಫ್, ಕೊಬ್ರಾ ಪೊಲೀಸ್, ಡಿಫೆನ್ಸ್ ಹಾಗೂ ಏರ್‌ಫೋರ್ಸ್ ಇಲಾಖೆಗಳಿವೆ. ಹೀಗಾಗಿ ಹಿರಿಯ ಅಧಿಕಾರಿಗಳ ಮಾನವ ಸಂಪನ್ಮೂಲ ಸದ್ಭಳಕೆ ಸಮಾಜಕ್ಕೆ ಮುಟ್ಟಿಸಬೇಕೆಂಬ ನಿಟ್ಟಿನಲ್ಲಿ ಐಪಿಎಸ್ ಅಧಿಕಾರಿಗಳಿಗೂ ತರಬೇತಿ ನೀಡುವ ಅವಶ್ಯಕತೆ ಇದೆ.
ಇದನ್ನು ಓದಿ: ಬಳ್ಳಾರಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ದಂಪತಿ ಸಾವು: ಮಗ ಪ್ರಾಣಾಯದಿಂದ ಪಾರು
ಹೀಗಾಗಿ ಮುಂಬರುವ ದಿನಗಳಲ್ಲಿ ಪೊಲೀಸ್ ಅಕಾಡೆಮಿ ಪ್ರಾರಂಭಿಸಬೇಕು ಎಂಬ ಉದ್ದೇಶ ಇಟ್ಟುಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಶಾಲೆಯನ್ನು ಆರಂಭಿಸುವ ಕುರಿತಂತೆ ನಮ್ಮ ಇಲಾಖೆಯಿಂದ ಚಿಂತನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಆರ್ಮಿ, ಏರ್‌ಫೋರ್ಸ್ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಈ ಬಗ್ಗೆ ಒಂದು ರೂಪುರೇಷೆ ಕೊಟ್ಟು ಸಿಎಂ ಜೊತೆಗೆ ಚರ್ಚಿಸಿ ಅನುಮತಿ ಪಡೆದುಕೊಂಡು ಆರಂಭಿಸಲಾಗುವುದು ಎಂದರು.
16 ಸಾವಿರ ಹುದ್ದೆ ಭರ್ತಿಗೆ ಕ್ರಮ:
ನಮ್ಮ ಸರ್ಕಾರದಿಂದ ಮುಂದಿನ 2 ವರ್ಷಗಳ ಅವಧಿಯಲ್ಲಿ 16 ಸಾವಿರ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ತರಬೇತಿ ಶಾಲೆಗಳಿಗೆ, ಕೆಎಸ್‌ಆರ್‌ಪಿಗೆ ಇನ್ನಷ್ಟು ಬಲ ತುಂಬಲು ಹಾಗೂ ಸಿಬ್ಬಂದಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು. ತರಬೇತಿ ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುವುದು. ಸೈಬರ್ ಕ್ರೈಂ, ಫೊರೆನ್ಸಿಕ್ ಹಾಗೂ ಕಂಪ್ಯೂಟರ್ ಮೊದಲಾದ ವಿಷಯಗಳಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ವಿಷಯಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.