ಬೆಳಗಾವಿ/ಬೆಂಗಳೂರು: ಆರೋಪಗಳಿಂದ ಮುಕ್ತರಾಗಿದ್ದರೂ ಸಚಿವ ಸ್ಥಾನ ನೀಡದ ಕಾರಣಕ್ಕೆ ಅಸಮಾಧಾನಗೊಂಡು ಬೆಳಗಾವಿ ಅಧಿವೇಶನಕ್ಕೆ ಗೈರಾಗಿದ್ದ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಕೊನೆಗೂ ಇಂದು ಸದನಕ್ಕೆ ಹಾಜರಾಗಿದ್ದಾರೆ.
ಸದನಕ್ಕೆ ಗೈರು ವಿಚಾರವಾಗಿ ಸುವರ್ಣಸೌಧದಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ನಾವು ಎರಡು ದಿನ ಗೈರಾದ ಉದ್ದೇಶ ಏನು ಅಂದರೆ, ನಮಗೆ ಕ್ಲೀನ್ ಚಿಟ್ ಸಿಕ್ಕಮೇಲೂ ಯಾಕೆ ನಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿಲ್ಲ? ಇದು ನಮ್ಮ ಪ್ರಶ್ನೆಯಲ್ಲ. ಇಡಿ ರಾಜ್ಯದ ಜನರು ಕಾರ್ಯಕರ್ತರ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಹತ್ತಿರ ಉತ್ತರ ಇಲ್ಲ ಎಂದರು.
ನಾವಾಗಲಿ ರಮೇಶ್ ಜಾರಕಿಹೊಳಿ ಆಗಲಿ ಮಂತ್ರಿ ಸ್ಥಾನ ಈಗ ನೋಡಿಲ್ಲ. ಈ ಹಿಂದೆಯೂ ಸಚಿವರಾಗಿದ್ದೇವೆ. ಇನ್ನೂ ಮೂರು ತಿಂಗಳಲ್ಲಿ ಸಚಿವರಾಗಿ ಏನು ಮಾಡುವುದಕ್ಕೆ ಆಗುವುದಿಲ್ಲವೆಂದು ನಮಗೂ ಗೊತ್ತು. ಇದು ಒಂದು ರೀತಿಯ ಪ್ರತಿಷ್ಠೆ ಅಷ್ಟೇ. ಯಾಕೆ ನಮಗೆ ಅನ್ಯಾಯ ಮಾಡ್ತಿದ್ದಾರೆ ಅನ್ನುವುದರ ಬಗ್ಗೆ ಕಾರ್ಯಕರ್ತರಿಗೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು.
ಸಾಹುಕಾರರೇ ಎಂದು ಸ್ವಾಗತಿಸದ ಕೆಲ ಶಾಸಕರು! ರಮೇಶ್ ಜಾರಕಿಹೊಳಿ ಸದನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಾಹುಕಾರರೇ ಎಂದು ಕೆಲ ಶಾಸಕರು ಸ್ವಾಗತಿಸದರು. ಸದದನ ಒಳಗೆ ಬಂದು ನೇರವಾಗಿ ನಾಲ್ಕನೇ ಸಾಲಿನಲ್ಲಿ ಆಸನದಲ್ಲಿ ಶಾಸಕ ಸಿ ಟಿ ರವಿ ಅವರಿಗೆ ಹಸ್ತಲಾಘವ ಮಾಡಿ ಅವರ ಪಕ್ಕದಲ್ಲಿ ಕುಳಿತುಕೊಂಡರು. ಸಿಡಿ ಪ್ರಕರಣ ಆದ ಬಳಿಕ ರಮೇಶ್ ಜಾರಕಿಹೊಳಿ ಅಧಿವೇಶನಕ್ಕೆ ಗೈರಾಗಿದ್ದರು. ಇದೇ ಮೊದಲ ಬಾರಿಗೆ ಅಧಿವೇಶನಕ್ಕೆ ಹಾಜರಾದರು.
ಜಾರಕಿಹೊಳಿ ಬಂದ ಐದು ನಿಮಿಷಕ್ಕೆ ಕೆ ಎಸ್ ಈಶ್ವರಪ್ಪ ಅವರು ಸದನಕ್ಕೆ ಆಗಮಿಸಿದರು. ಆಗ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಗುತ್ತಾ ಮಾತನಾಡಿದರು. ಅಲ್ಲದೆ ಮುಂದೆ ಕುಳಿತುಕೊಳ್ಳುವಂತೆ ಯಡಿಯೂರಪ್ಪ ಅವರು ಈಶ್ವರಪ್ಪ ಅವರಿಗೆ ಸೂಚಿಸಿದರು. ನಂತರ ನಾಲ್ಕನೇ ಸಾಲಿನಲ್ಲಿ ಸಚಿವ ಮುನಿರತ್ನ ಅವರ ಪಕ್ಕ ಬಂದು ಕುಳಿತರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯ ಬೆಂಬಲ ಕಂಡು ಬಿಜೆಪಿಯವರು ಕೋವಿಡ್ ಭೀತಿ ಶುರು ಮಾಡಿದ್ದಾರೆ; ಡಿ ಕೆ ಶಿವಕುಮಾರ್