ಬೆಳಗಾವಿ : ರೆಸಾರ್ಟ್ ರಾಜಕಾರಣ ಮತ್ತು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸ್ಪರ್ಧೆಯಿಂದ ಗಮನ ಸೆಳೆದಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಮೂರು ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶವೂ ಪ್ರಕಟವಾಗಲಿದೆ.
ಬೆಳಗಾವಿ ಬಿಕೆ ಮಾಡೇಲ್ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ಕಣದಲ್ಲಿದ್ದಾರೆ. ಈಗಾಗಲೇ ಉಭಯ ನಾಯಕರು ಬೆಂಬಲಿಗರನ್ನು ರೆಸಾರ್ಟ್‍ನಲ್ಲಿ ಇರಿಸಿದ್ದು, ಚುನಾವಣೆ ಕಣ ರಂಗೇರುವಂತೆ ಮಾಡಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಂಜಲಿ ಗೆಲುವಿಗೆ ರಣತಂತ್ರ ರೂಪಿಸಿದ್ರೆ, ಇತ್ತ ಅರವಿಂದ ಪಾಟೀಲ ಬೆನ್ನಿಗೆ ಡಿಸಿಎಂ ಲಕ್ಷ್ಮಣ ಸವದಿ, ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕತ್ತಿ ಸಹೋದರರು ನಿಂತಿದ್ದಾರೆ. ಉಳಿದಂತೆ ರಾಮದುರ್ಗ ಕೃಷಿಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ ಹಾಗೂ ನೇಕಾರ ಸಹಕಾರ ಅಭಿವೃದ್ಧಿ ಸಂಘದ ಪ್ರತಿನಿಧಿಗಳಿಗೆ ಚುನಾವಣೆ ನಡೆಯಲಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಉಭಯ ಬಣಗಳ ಅಭ್ಯರ್ಥಿಗಳಿದ್ದರೂ ಚುನಾವಣೆ ಕಣ ಅಷ್ಟೇನೂ ರಂಗು ಪಡೆದಿಲ್ಲ. ನಾಳೆ ಬೆಳಗ್ಗೆ 9ಕ್ಕೆ ಮತದಾನ ಆರಂಭವಾಗಲಿದ್ದು, 4ಕ್ಕೆ ಪೂರ್ಣಗೊಳ್ಳಲಿದೆ. ನಾಲ್ಕರ ನಂತ್ರ ಮತಏಣಿಕೆ ನಡೆಯಲಿದ್ದು, ಸಂಜೆ ವೇಳೆ ಫಲಿತಾಂಶ ಪ್ರಕಟವಾಗಲಿದೆ.