ಚಿಕ್ಕೋಡಿ: ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಕಚೇರಿಯಿಂದ ಆಡಳಿತ ನಡೆಸಿಲ್ಲ. ಫೈವ್ ಸ್ಟಾರ್ ಹೋಟೆಲ್ನಿಂದ ರಾಜಕೀಯ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಂಗಸೂಳಿ ಗ್ರಾಮದ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿದ್ದ ಸಚಿವರು ವಿಧಾನಸಭೆಯಿಂದ ಆಡಳಿತ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬೇಡಿಕೊಂಡರೂ ಅನುದಾನ ನೀಡಿರಲಿಲ್ಲ. ಶಾಸಕರ ಭೇಟಿಗೆ ಒಂದಿಷ್ಟು ಸಮಯವನ್ನು ಮೀಸಲಿಡುತ್ತಿರಲಿಲ್ಲ. ಇದಕ್ಕೆ ಬೇಸತ್ತು 17 ಶಾಸಕರು ರಾಜೀನಾಮೆ ಕೊಟ್ಟರು ಎಂದು ಆರೋಪಿಸಿದರು.
ರಾಜ್ಯದ ಇತಿಹಾಸದಲ್ಲಿ ಅಭಿವೃದ್ಧಿಗಾಗಿ 30-40 ಸಾವಿರ ಮತಗಳ ಅಂತರದಿಂದ ಗೆದ್ದ ಶಾಸಕರು ಅಧಿಕಾರದಲ್ಲಿದ್ದ ಪಕ್ಷವನ್ನೇ ತ್ಯಜಿಸಿದ್ದರು. ಶ್ರೀಮಂತ ಪಾಟೀಲರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶ್ರೀಮಂತ ಪಾಟೀಲರು ಈಗಾಗಲೇ ಗೆದ್ದಾಗಿದೆ. ನಿಮ್ಮ ಕ್ಷೇತ್ರಕ್ಕೆ ಮಂತ್ರಿಯಾಗಿ ಬರುತ್ತಾರೆ. ಕಾಂಗ್ರೆಸ್ ಎಲ್ಲ ಹಿರಿಯರು ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದರ ಪರಿಣಾಮ ಒಬ್ಬಂಟಿಯಾಗಿದ್ದಾರೆ. ಕಾಂಗ್ರೆಸ್ನ ಎಲ್ಲ ಕಾರ್ಯಕರ್ತರು ಬಿಜೆಪಿಯತ್ತ ಬರುತ್ತಿದ್ದಾರೆ. ನೀವು ಶ್ರೀಮಂತ ಪಾಟೀಲರನ್ನು ಗೆಲ್ಲಿಸಿ ಕೊಡುವುದು ನಿಮ್ಮ ಕೆಲಸ ಎಂದು ಹೇಳಿದರು.