ಅಥಣಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ದಕ್ಷ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಅಥಣಿ ಪಟ್ಟಣದ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಪ್ರತಿವರ್ಷ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ, ಶಿಕ್ಷಕಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ 2020-21 ನೇ ಸಾಲಿನ ದಕ್ಷ ಶಿಕ್ಷಕ ಪ್ರಶಸ್ತಿ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್ ಚಿಕ್ಕಟ್ಟಿ ಮಾತನಾಡಿ, ಜೀವನದಲ್ಲಿ ವಿದ್ಯಾರ್ಥಿಗಳನ್ನು ಮಕ್ಕಳಂತೆ ಕಂಡು ನಿರಂತರವಾಗಿ ಅವರ ಏಳಿಗೆಯನ್ನು ಬಯಸುತ್ತ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವವನೇ ನಿಜವಾದ ಶಿಕ್ಷಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ದಕ್ಷ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ನಮ್ಮ ಸಂಸ್ಥೆಯಿಂದ ಕೊಡುತ್ತಾ ಬಂದಿದ್ದೇವೆ. ಕೋವಿಡ್-19 ಕಾರಣಕ್ಕಾಗಿ ಸರಳ ಸಮಾರಂಭ ಏರ್ಪಡಿಸಿದ್ದು, ಸರ್ಕಾರಿ ಶಾಲೆ ಶಿಕ್ಷಕರು ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ಸೇವಾ ಮನೋಭಾವದಿಂದ ಸರ್ಕಾರಿ ಶಾಲೆಯಲ್ಲಿರುವ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಏಳಿಗೆಗೆ ಶ್ರಮಿಸುತ್ತ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಲಿ ಎಂಬುದೇ ನಮ್ಮ ದಕ್ಷ ಶಿಕ್ಷಕ ಪ್ರಶಸ್ತಿ ನೀಡುವ ಆಶಯವಾಗಿದೆ ಎಂದು ಹೇಳಿದರು.