ಚಿಕ್ಕೋಡಿ: ಹಣದ ಬಲದಿಂದ ಜನರನ್ನು ಖರೀದಿ ಮಾಡಬಹುದು ಎಂದು ಕೆಲವು ಅಧಿಕಾರಿಗಳು ರಾಜಕಾರಣಕ್ಕೆ ಬರುತ್ತಾರೆ. ಅವರು ಸೆಲ್ಯೂಟ್ ಹೊಡೆಸಿಕೊಂಡು, ನಮಸ್ಕಾರ ಮಾಡಿಸಿಕೊಂಡು ರೂಢಿ ಇರುತ್ತದೆ. ಆದರೆ ಜನರ ಪ್ರಾಮಾಣಿಕ ಸೇವೆ ಮಾಡಿ ಜನರ ಸುಖ ದುಃಖವನ್ನು ಅರ್ಥ ಮಾಡಿಕೊಳ್ಳುವವರನ್ನು ಆಯ್ಕೆ ಮಾಡಿದರೆ ಅವರು ನಿಮ್ಮ ಸೇವೆ ಮಾಡುತ್ತಾರೆ ಎಂದು ಪರೋಕ್ಷವಾಗಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದಿರು.
ರಾಯಭಾಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧುರ್ಯೊಧನ ಐಹೊಳೆ ಅವರ ಪರ ರೋಡ್ ಶೋ ನಡೆಸಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ನಿಮ್ಮ ಪ್ರತಿನಿಧಿ ನಿಮ್ಮ ಸೇವೆ ಮಾಡಿದರೆ ಅವರನ್ನು ಮತ್ತೆ ಮುಂದುವರೆಸಿ. ನಿಮ್ಮ ಮತ ಪಡೆದು ಅವರೇ ಮಾಲೀಕರಾದರೆ ಜನರು ಏನು ಮಾಡುವುದು. ನಾವು ಸ್ವಾಭಿಮಾನಿಗಳಿದ್ದೇವೆ. ನಮ್ಮ ಮತ ಮಾರಾಟಕ್ಕಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೋವಿಡ್ನಿಂದ ಪ್ರಧಾನಿ ನಮ್ಮನ್ನು ಬದುಕಿಸಿದ್ದಾರೆ: ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಎಲ್ಲ ಜನರ ಸುರಕ್ಷತೆಗಾಗಿ ಹಗಲಿರುಳು ಕೆಲಸ ಮಾಡಿರುವುದು ನೀವು ನೋಡಿದ್ದೀರಿ. ಎಲ್ಲರ ಕೆಲಸದಿಂದ ಕೋವಿಡ್ ವಿರುದ್ದ ಜಯ ಸಾಧಿಸಿದ್ದೇವೆ. ಎರಡು ವರ್ಷದ ಹಿಂದೆ ಎಲ್ಲರೂ ಮಾಸ್ಕ್ ಹಾಕೊಳ್ಳುತ್ತಿದ್ದೇವು. ಈಗ ಯಾರೂ ಮಾಸ್ಕ್ ಹಾಕಿಕೊಳ್ಳುವ ಪರಿಸ್ಥಿತಿ ಇಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಲಸಿಕೆ ದೇಶದ 130 ಕೋಟಿ ಜನರು ಪಡೆದುಕೊಂಡು ಕೋವಿಡ್ ಅನ್ನು ಓಡಿಸಿದರು. ಕೋವಿಡ್ ಸಂದರ್ಭದಲ್ಲಿ ಕುಸಿದ ಆರ್ಥಿಕತೆಗೆ ಚೇತರಿಕೆ ತಂದು ರಾಜ್ಯದ ಬೊಕ್ಕಸವನ್ನು ತುಂಬಿ ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ 85 ಪರ್ಸೆಂಟ್ ಸರ್ಕಾರ: ಕಾಂಗ್ರೆಸ್ ಕಾಲದಲ್ಲಿ ಎಲ್ಲದಕ್ಕೂ ಕಮಿಷನ್ ಪಡೆಯುತ್ತಿದ್ದರು. ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ಸಾಮಾಜಿಕ ನ್ಯಾಯ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. 30 ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆಸಿದರೂ ಅವರಿಗೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ನಾನು ಬಂದು ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅಲ್ಲದೇ ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೆನೆ. ಲಿಂಗಾಯತರ ಮೀಸಲಾತಿಯನ್ನೂ ಹೆಚ್ಚಳ ಮಾಡಿದ್ದೇವೆ. ನಾವು ಎಲ್ಲ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಜನರು ಈಗ ಜಾಗೃತರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವಚನ ಭ್ರಷ್ಟ ಪಕ್ಷ ಕಾಂಗ್ರೆಸ್: ಉತ್ತರ ಕರ್ನಾಟಕದ ಪ್ರಮುಖ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ಕೊಡುವುದಾಗಿ ಕೃಷ್ಣೆಯ ಮೇಲೆ ಕಾಂಗ್ರೆಸ್ ಪಕ್ಷ ಆಣೆ ಮಾಡಿದ್ದರು. ಆದರೆ, ಐದು ವರ್ಷ ಯಾವುದೇ ಯೋಜನೆ ಪೂರ್ಣಗೊಳಿಸಲಿಲ್ಲ. ಇದು ವಚನ ಭ್ರಷ್ಟ ಪಕ್ಷ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದೀನ ದಲಿತರು, ಹಿಂದುಳಿದವರನ್ನು ಹೀನಾಯವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ನಡೆಸಿದರೂ, ಅವರು ಮಾಡಲಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಬಾರದ ರಾಹುಲ್ ಗಾಂಧಿ ಈಗ ಕೂಡಲ ಸಂಗಮಕ್ಕೆ ಬಂದಿದ್ದರು. ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಬರಲಿಲ್ಲ. ಇಲ್ಲಿ ಮತಕ್ಕೆ ಸ್ವಾಭಿಮಾನದ ಬೆಲೆ ಇದೆ. ಅದನ್ನು 500, 1000 ರೂ.ಗೆ ಮಾರಾಟ ಮಾಡಬಾರದು ಎಂದರು.
ಇದನ್ನೂ ಓದಿ: ಪತಿಗೆ ಪತ್ನಿಯೇ ಸ್ಟಾರ್ ಪ್ರಚಾರಕಿ: ಚುನಾವಣಾ ಅಖಾಡ ರಂಗೇರಿಸಿದ ಮಹಿಳಾಮಣಿಯರು