ಬೆಳಗಾವಿ: ಕೊರೊನಾಗೆ ಸಂಬಂಧಿಸಿದಂತೆ ಗಂಟಲು ದ್ರವ ಸಂಗ್ರಹದ ಮೂರು ಸಂಚಾರಿ ಘಟಕಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನಿಷ್ಠ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಇರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು 3 ಸಂಚಾರಿ ಸ್ವ್ಯಾಬ್ ಟೆಸ್ಟ್ ವಾಹನಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಆದರೆ, ಈ ವೇಳೆ ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ಕಂಡು ಬರುತ್ತಿರುವ ಪ್ರದೇಶಗಳಲ್ಲಿ ಸ್ವ್ಯಾಬ್ ಟೆಸ್ಟ್ಗೆ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಮೂರು ಬಸ್‍ಗಳನ್ನು ಬಿಡಲಾಗಿದೆ. ಇದರಿಂದ ವೇಗವಾಗಿ ಸೋಂಕಿತರ ಪರೀಕ್ಷೆ ಮಾಡಲು ಸಾಧ್ಯವಾಗಲಿದೆ ಎಂದರು.