ಬೆಳಗಾವಿ : ಗೋವಾದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ಮೋಸ್ಟ್ ಕರಪ್ಟೆಡ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗುಡುಗಿದರು. ಗೋವಾದ ಪಣಜಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನನಗಿದೆ.
ಕಳೆದ ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್‌ಗೆ 17 ಸೀಟ್ ಬಂದಿತ್ತು. ಆಪರೇಷನ್ ಕಮಲ ಮಾಡಿ ಗೋವಾದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಮೋಸ್ಟ್ ಕರಪ್ಟೆಡ್ ಗವರ್ನಮೆಂಟ್ ಎಂದು ರಾಜ್ಯಪಾಲರೇ ಹೇಳಿದ್ದಾರೆ.
ಸಿಟ್ಟಿಂಗ್ ಎಂಎಲ್‌ಎ, ಸಿಎಂ ಆಗಿದ್ದವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಹಲವು ಮಿನಿಸ್ಟರ್‌ಗೆ ಟಿಕೆಟ್ ನೀಡಲಾಗಿಲ್ಲ. ಭ್ರಷ್ಟಾಚಾರ ಯಾವ ಮಟ್ಟಿಗೆ ಹೋಗಿತ್ತು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಟಿಕೆಟ್ ವಂಚಿತರೆಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ.
ಗೋವಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಆಲ್ ಇಸ್ ನಾಟ್ ವೆಲ್. ಕಾಂಗ್ರೆಸ್ ಎಲ್ಲ ಯುವಕರಿಗೆ, ಹೊಸಬರಿಗೆ ಅವಕಾಶ ಮಾಡಿಕೊಟ್ಟಿದೆ. ಗೋವಾ ಜನತೆ ಬಹಳ ಪ್ರಜ್ಞಾವಂತರಿದ್ದಾರೆ ಎಂದರು.
ಈ ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹೊರಗಿನ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಶೇ.40ರಷ್ಟು ಇಲ್ಲಿ ಅಲ್ಪಸಂಖ್ಯಾತರಿದ್ದಾರೆ.
ಬಿಜೆಪಿ ಸರ್ಕಾರದಿಂದ ಈ ಎಲ್ಲರ ಮನಸ್ಸಿಗೆ ನೋವಾಗಿದೆ. ಗೋವಾದಲ್ಲಿ ಬಲಿಷ್ಟ ಕಾಂಗ್ರೆಸ್ ಸರ್ಕಾರ ತರಬೇಕೆಂದು ಮತದಾರರೇ ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಕಾಂಗ್ರೆಸ್ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ : ಸಚಿವ ಆರ್. ಅಶೋಕ್ ವ್ಯಂಗ್ಯ