ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷಕ್ಕೆ ಬನ್ನಿ ನಿಮಗೆ ಟಿಕೆಟ್ ಕೊಡುತ್ತೇವೆ ಎಂದು ನಮ್ಮ ಬಿಜೆಪಿ ಪಕ್ಷದ ಶಾಸಕರಿಗೆ ಕರೆ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೊಸ ಬಾಂಬ್ ಹಾಕಿದ್ದಾರೆ. ಇಂದು ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ಮೂರು ದಿನಗಳಿಂದ ಎಲ್ಲಾ ನಮ್ಮ ಶಾಸಕರಿಗೆ ದೂರವಾಣಿ ಕರೆ ಮುಖಾಂತರ ಸಂಪರ್ಕ ಮಾಡಿ ನಮ್ಮ ಶಾಸಕರಿಗೆ ಆಹ್ವಾನ ಮಾಡುತ್ತಿದ್ದಾರೆ. ಇವರು ಎಷ್ಟು ಹತಾಸೆ ಆಗಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಇವರಿಗೆ ಸರಿಯಾದ ಅಭ್ಯರ್ಥಿಗಳು ಇಲ್ಲದೆ ಇರುವುದರಿಂದ ನಮ್ಮ ಶಾಸಕರನ್ನು ಸಂಪರ್ಕ ಮಾಡುತ್ತಿದ್ದು, ಇದು ಕಾಂಗ್ರೆಸ್ ಪಕ್ಷ ದಿವಾಳಿ ಆಗಿದೆ ಎಂಬುದಕ್ಕೆ ಸ್ಪಷ್ಟ ಸನ್ನಿವೇಶವನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್ಡಿಪಿಐ ಮುಖಂಡ ಅವಹೇಳನಕಾರಿ ಹೇಳಿಕೆ ವಿಚಾರ : ಸಿಎಂ ವಿರುದ್ದ ಚಿತ್ರದುರ್ಗದಲ್ಲಿ ಎಸ್ಡಿಪಿಐ ಮುಖಂಡನ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಎಸ್ಡಿಪಿಐನವರು ನನ್ನನ್ನ ಹೊಗಳೋಕೆ ಸಾಧ್ಯನಾ? ಅದೊಂದು ದೇಶದ್ರೋಹಿ ಸಂಘಟನೆ ಎಂಬುಂದು ತಿಳಿದಿದೆ. ಅವರು ಯಾವಾಗಲು ಈ ದೇಶದ ವಿರೋಧಿ ಚಟುವಟಿಕೆ ಮಾಡುತ್ತಾರೆ. ಅಲ್ಪಸಂಖ್ಯಾತರ ವಿರೋಧಿಯೇ ಎಸ್ಡಿಪಿಐ. ಹೀಗಿರುವಾಗ ಅವರಿಂದ ನಾನೇನು ಹೊಗಳಿಕೆ ಬಯಸೋದಿಲ್ಲ. ನಮ್ಮ ಚಿಂತನೆಯ ವಿರೋಧಿ ಎಸ್ಡಿಪಿಐ. ಅದರಿಂದ ಖಂಡಿತವಾಗಿ ಅಂತವರ ವಿರುದ್ಧ ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.
ಮುಂದಿನ ತಿಂಗಳು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು. ಗೆಲ್ಲುವಂತ ಪಕ್ಷಕ್ಕೆ ಎಲ್ಲಾ ಕಡೆ ಫೈಟ್ ಇದ್ದೇ ಇರುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
(ಕಲಬುರಗಿ) ಬಿಎಸ್‌ವೈ ಮನೆ ಮೇಲೆ ಕಲ್ಲು ಹೊಡೆದಿದ್ದು ಕಾಂಗ್ರೆಸ್ ನವರು- ಸಿಎಂ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕುತಂತ್ರದಿಂದ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ಪೊಲೀಸರ ಕೈಗೆ ಸಿಕ್ಕವರು, ಕ್ಯಾಮಾರಾ ವಿಡಿಯೋದಲ್ಲಿ ಸಿಕ್ಕಿರೋದು ಕಾಂಗ್ರೆಸ್‌ನವರೇ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಕರೆ ನೀಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತಾಗಿ ಕಲಬುರಗಿಯಲ್ಲಿ ಮಾತನಾಡಿದ ಸಿಎಂ, ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿದ್ದು ಬಿಜೆಪಿ ಕುತಂತ್ರ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕಿಡಿಕಾರಿದರು. ಡಿಕೆ ಶಿವಕುಮಾರ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದರು.
ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಕುತಂತ್ರ ಇದೆ., ಅಲ್ಲಿ ಸಿಕ್ಕಿರೋ ನಾಯಕರು ಕಾಂಗ್ರೆಸ್ ನಾಯಕರು. ಜನರನ್ನು ಕಾಂಗ್ರೆಸ್ ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ರಾತ್ರಿ ಮೀಟಿಂಗ್ ಮಾಡಿ, ಲಂಬಾಣಿ ಜನರನ್ನು ಎಸ್ಸಿ ಯಿಂದ ತಗೆಯುತ್ತಾರೆ ಎಂಬ ಸುಳ್ಳು ಸಂದೇಶ ರವಾನಿಸಿದ್ದಾರೆ. ಇದು ವ್ಯವಸ್ಥಿತವಾಗಿ ಕಾಂಗ್ರೆಸ್ ನವರು ಮಾಡಿರೋದು ನಾನು ಸಾಕ್ಷಿ ಸಮೇತ ಹೇಳುತ್ತಿದ್ದೇನೆ. ಡಿ.ಕೆ.ಶಿವಕುಮಾರ್ ಅವರು ಸುಳ್ಳು ಹೇಳೋದನ್ನು ಬಿಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ಗೆ ಹೊಟ್ಟೆ ಕಿಚ್ಚು-ಸಿಎಂ ಬೊಮ್ಮಾಯಿ : ಚುನಾವಣೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂಬ ಆರೋಪ ಕುರಿತಾಗಿ ಮಾತನಾಡಿದ ಸಿಎಂ, ಕಾಂಗ್ರೆಸ್ ಗೆ ಹೊಟ್ಟೆ ಕಿಚ್ಚು, ಅವರು ಮಾಡದಿರೋದು ನಾವು ಮಾಡಿದ್ದೇವೆ ಎಂದರು. ಕಾಂಗ್ರೆಸ್ ನಿಂದ ವಲಸೆ ಹೋದವರು ಮತ್ತೆ ಕಾಂಗ್ರೆಸ್ ಬರುತ್ತಾರೆ ಅನ್ನೋ ಚಲುವನಾರಾಯಣ ಸ್ವಾಮಿ ಹೇಳಿಕೆ ವಿಚಾರಕ್ಕೆ, ಚಲುವನಾರಾಯಣ ಸ್ವಾಮಿಯೇ ವಲಸೆ ವ್ಯಕ್ತಿ, ಆತನ ಮಾತು ನಂಬೋಕೆ ಆಗುತ್ತಾ? ಎಂದು ಹೇಳಿದರು.
ಯಾರ ಜೊತೆಗೂ ಹೊಂದಣಿಕೆ ಇಲ್ಲ : ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಯಾರ ಜೊತೆಗೂ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದಾರೆ. ನಾನು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ. ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ ಎಂದು ಹೇಳಿದರು. ಇದೇ ವೇಳೆ ಪಿಎಂ ಮಿತ್ರ ಯೋಜನೆಯಡಿ ಕಲಬುರಗಿಗೆ ಟೆಕ್ಷಟೈಲ್ ಪಾರ್ಕ್, 371 ಜೆ ಆದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿರೋ ದೊಡ್ಡ ಯೋಜನೆಯಾಗಿದೆ. ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಯಿಂದ ಈ ಭಾಗದ ಆರ್ಥಿಕ, ಉದ್ಯೋಗ ಪ್ರಗತಿಗೆ ದೊಡ್ಡ ಶಕ್ತಿ ತುಂಬುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ವಿರುದ್ಧ ಯತ್ನಾಳ್ ಆಕ್ರೋಶ