ಬೆಳಗಾವಿ : ಉಪ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಸ್.ಬಿ.ಬೊಮ್ಮನಹಳ್ಳಿ, ಯಾವುದೇ ರೀತಿಯ ಹೊಸ ಕಾಮಗಾರಿಗಳನ್ನು ಆರಂಭಿಸಬಾರದು, ಒಂದು ವೇಳೆ ಈಗಾಗಲೇ ಕಾಮಗಾರಿ ಆರಂಭಿಸಿದ್ದರೆ ಕೆಲಸ ಮುಂದುವರಿಸಲು ಯಾವುದೇ ತೊಂದರೆಯಿಲ್ಲ, ಇಲಾಖಾವಾರು ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಗೆ ಸಾಕಷ್ಟು ಸಮಯ ಇರುವುದರಿಂದ ಮಾದರಿ ನೀತಿ ಸಂಹಿತೆ ವೇಳೆ ಹೊಸದಾಗಿ ಯಾವುದೇ ಕಾಮಗಾರಿ ಆರಂಭಿಸಬಾರದು. ಅನಗತ್ಯವಾಗಿ ಸಚಿವರು ಅಥವಾ ಜನಪ್ರತಿನಿಧಿಗಳ ಭೇಟಿ ಸೇರಿದಂತೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರೀತಿಯಲ್ಲಿ ಯಾವುದೇ ರೀತಿಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬಾರದೆಂದು ಸೂಚನೆ ನೀಡಿದರು.
ಚುನಾವಣಾ ಕರ್ತವ್ಯ ಕಡ್ಡಾಯ: ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಅಧಿಕಾರಿಗಳು ಅಥವಾ ಕೆಳಹಂತದ ಸಿಬ್ಬಂದಿಗೆ ರಜೆ ನೀಡಬಾರದು. ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ಹೊರಗಡೆ ತೆರಳಬಾರದೆಂದು ತಿಳಿಸಿದರು.
ಸಭೆ-ಸಮಾರಂಭ ಅನುಮತಿ ಕಡ್ಡಾಯ : ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದ್ದು, ಏಕ ಗವಾಕ್ಷಿ ಪದ್ಧತಿಯಲ್ಲಿ ಸಂಘಟಕರಿಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಸಭೆ-ಸಮಾರಂಭ ಮತ್ತು ಮೆರವಣಿಗೆಗೆ ಪರವಾನಿಗೆ ನೀಡಲಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದರು. ಪರವಾನಿಗೆ ಹೊಂದಿರುವ ಆಯುಧಗಳನ್ನು ಕೂಡಲೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ನಿಯಮಾವಳಿ ಅನ್ವಯ ಜಮಾ ಮಾಡಬೇಕೆಂದರು.
ಚುನಾವಣಾ ಕರ್ತವ್ಯ ಕಡ್ಡಾಯ: ಚುನಾವಣೆಗೆ ನಿಯೋಜಿಸಲಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ನೀಡಲಾಗುವ ಕೆಲಸವನ್ನು ಕಡ್ಡಾಯವಾಗಿ ನಿರ್ವಹಿಸಬೇಕೆಂದು ಹೇಳಿದರು. ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ, ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ವಿಕಲಚೇತನರು, ಗರ್ಭಿಣಿಯರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಮನವಿ ಪರಿಶೀಲಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಕಟ್ಟಡಗಳ ಪರಿಶೀಲನೆಗೆ ಸೂಚನೆ: ಕಳೆದ ಬಾರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದ ಶಾಲಾ ಕಟ್ಟಡಗಳನ್ನು ಕೂಡಲೇ ಪರಿಶೀಲಿಸಿ ವರದಿಯನ್ನು ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವೇಳೆ ಯಾವುದಾದರೂ ಕಟ್ಟಡಗಳು ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿಗೊಳಿಸಬೇಕು. ಒಂದು ವೇಳೆ ಕಟ್ಟಡಗಳು ಸಂಪೂರ್ಣ ಕುಸಿದಿದ್ದರೆ ಪರ್ಯಾಯ ಮತಗಟ್ಟೆಗಳನ್ನು ಗುರುತಿಸಲಾಗುವುದು ಎಂದರು.