ಬೆಳಗಾವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಡ ಟೈಲರ್ ಕುಟುಂಬಗಳಿಗೆ ಅಗತ್ಯ ವಸ್ತುಗಳಿರುವ ದಿನಸಿ ಕಿಟ್ಗಳನ್ನು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ನೀಡಿದ್ದು ಮಾನವೀಯತೆ ತೋರಿದ್ದಾರೆ.
ಬಳಿಕ ಮಾತನಾಡಿದ ಸಿದ್ದನಗೌಡ ಪಾಟೀಲ, ಕೊರೊನಾ ವೈರಸ್ ಹೊಡೆತ ಉದ್ಯೋಗಸ್ಥರಿಗೆ ತೀವ್ರ ಸಂಕಷ್ಟ ತಂದಿದೆ. ಕಳೆದೆರಡು ತಿಂಗಳಿಂದ ಅನೇಕ ಉದ್ಯೋಗಗಳು ನಿಂತು ಹೋಗಿವೆ. ಇದರಿಂದ ಸಾವಿರಾರು ಕುಟುಂಬಗಳು ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದ್ರೆ ಕೊರೊನಾ ಮಹಾಮಾರಿಗೆ ಯಾರೂ ಧೃತಿಗೆಡದೆ ಒಬ್ಬರಿಗೊಬ್ಬರು ಸಹಾಯ ಪರಸ್ಪರ ಸಹಕಾರದಿಂದ ಪರಿಸ್ಥಿತಿಯನ್ನು ಎದುರಿಸುವುದು ಅನಿವಾರ್ಯ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಶೋಕ ಚಂದರಗಿ ಮಾತನಾಡಿ, ಕನ್ನಡ ಕ್ರಿಯಾ ಸಮಿತಿಯಿಂದ ಹಸಿದವರತ್ತ ನಮ್ಮ ಚಿತ್ತ ಎಂಬ ಘೋಷದಡಿ ಕೊರೊನಾ ಹೊಡೆತಕ್ಕೆ ನಲುಗಿದ ಜನರಿಗೆ ಸಹಾಯಕ್ಕೆ ಸಂಘಟನೆ ಹುಟ್ಟಿಕೊಂಡಿದೆ. ಉದ್ಯೋಗವಿಲ್ಲದೇ ಸಾಕಷ್ಟು ಜನರ ಬದುಕು ಬೀದಿ ಪಾಲಾಗಿದೆ. ಹೀಗಾಗಿ ಉಳ್ಳವರು ಇಲ್ಲದವರಿಗೆ ತಮ್ಮಿಂದಾದ ಸಹಾಯ ಮಾಡಲು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡಪರ ಸಂಘಟನೆಯ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಮೈನುದ್ದೀನ್ ಮಕಾನದಾರ, ಶಂಕರ ಬಾಗೇವಾಡಿ, ಬಾಬೂಸಂಗೋಡಿ, ಶಿವಪ್ಪ ಶಮರಂತ, ಸುವರ್ಣ ಪಾಟೀಲ, ವಿನಯ ಪಾಟೀಲ ಮತ್ತಿತರು ಈ ವೇಳೆ ಉಪಸ್ಥಿತರಿದ್ದರು.