ಚಿಕ್ಕೋಡಿ: ಕೃಷ್ಣಾ ನದಿ ನೀರಿನಲ್ಲಿ ಜಲಾವೃತ್ತಗೊಂಡ ಗ್ರಾಮದಲ್ಲಿಯ ನಿರಾಶ್ರಿತರಿಗೆ ಬೆಂಗಳೂರಿನ ಶ್ರೀ ಖಂಡೆಲವಾಲ್ ದಿಗಂಬರ್ ಜೈನ ಸಮಾಜ ಮತ್ತು ಹಿಂದೂಸ್ಥಾನ ಏರೋನಾಟಿಕಲ್ ಕಂಪನಿ ಹಾಗೂ ಜೈನ ಸಮಾಜ ಸಂಘಟನೆಗಳಿಂದ 25 ಲಕ್ಷ ರೂ. ಪರಿಹಾರದ ಕಿಟ್ನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ, ಮೊಳವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ ನಿರ್ಮಲ್ ಜೈನ್, ಯುವಾ ಮಂಚ ದರ್ಪನಲೋಡಾ ಸುಭಾಷ ಪಾಟ್ನಿ, ಪ್ರಮೋದ ಜೈನ್, ಅನಿಲ್ ಜೈನ್ ಇವರು ಉಗಾರದ ಪದ್ಮಾವತಿ ಜೈನ ಮಂದಿರದ ಮುಖ್ಯಸ್ಥ ಶೀತಲ ಪಾಟೀಲ್ ಹಾಗೂ ಗ್ರಾ.ಪಂ. ಅಧ್ಯಕ್ಷ ಜೈಪಾಲ ಯರೆಂಡೋಲೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಪರಿಹಾರ ಕಿಟ್ ವಿತರಿಸಿದರು.
ಬೆಂಗಳೂರಿನ ಯುವ ಜೈನ್ ಮಿಲನ್ ಅಧ್ಯಕ್ಷ ನಿರ್ಮಲ್ ಜೈನ್ ಅವರು, ಕೃಷ್ಣಾ ನದಿ ನೀರಿನಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಜೈನ ಸಮಾಜದ ವಿವಿಧ ಸಂಘಟನೆಗಳು ಒಂದುಗೂಡಿ ನಿರಾಶ್ರಿತರ ಸಹಾಯಕ್ಕಾಗಿ 25 ಲಕ್ಷ ರೂ. ವೆಚ್ಚದ ಪರಿಹಾರ ಕಿಟ್‍ಗಳನ್ನು ತೆಗೆದುಕೊಂಡು ಬಂದಿದ್ದೇವೆ. ನಿತ್ಯ ಬಳಿಸುವ ಎಲ್ಲ ವ್ಯವಸ್ಥೆ ಈ ಕಿಟ್‍ಗಳಲ್ಲಿವೆ ಎಂದು ಹೇಳಿದರು.
ಮೂಲತಃ ಕುಸನಾಳ ಗ್ರಾಮದವರು ಈಗ ಬೆಂಗಳೂರು ನಿವಾಸಿಗಳಾದ ಸುರೇಶ ಬಳೋಲ್ ಇವರ ಪ್ರಯತ್ನದಿಂದ ಬೆಂಗಳೂರಿನ ವಿಶ್ವವಿದ್ಯಾಲಯದಿಂದ 2 ಲಾರಿ, ದೇವನಹಳ್ಳಿಯಿಂದ 1 ಲಾರಿ, ಫೋಟೊ ಮತ್ತು ವಿಡಿಯೋ ಗ್ರೂಪ್ ಯುವ ಚೈತನ್ಯ ಫೌಂಡೇಶನ್ ಹುಬ್ಬಳ್ಳಿ ಇವರಿಂದ ವಿವಿಧ ಪರಿಹಾರ ಕಿಟ್ ವಿತರಿಸಿದರು. ಇದರಿಂದ ಕುಸನಾಳ, ಮಳವಾಡ ಗ್ರಾಮದ ನೆರೆ ಸಂತ್ರಸ್ತರಿಗೆ ಅನಕೂಲವಾಗಿದೆ.