ಬೆಳಗಾವಿ: ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿ ಒಂದು ದಿನ ಕಳೆಯುವುದರೊಳಗೆ ಅಗೌರವದಿಂದ ಅಂತ್ಯಕ್ರಿಯೆ ನಡೆಸಿದ ಮತ್ತೊಂದು ಆರೋಪ ಕೇಳಿ ಬಂದಿದೆ.
ಗೋಕಾಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತದೇಹಗಳನ್ನು ಹಗ್ಗದಿಂದ ಎಳೆದು ತಂದು ಅಂತ್ಯ ಸಂಸ್ಕಾರ ಮಾಡುವ ಮೂಲಕ ಅಗೌರವ ತೋರಲಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಕೊರೊನಾ ಸೋಂಕಿಗೆ ಬಲಿಯಾದ 92 ವರ್ಷದ ವೃದ್ಧ ಸೇರಿ ಇಬ್ಬರ ಅಂತ್ಯಕ್ರಿಯೆ ನಗರದ ರುದ್ರಭೂಮಿಯಲ್ಲಿ ನಡೆಸಲಾಯಿತು. ಈ ವೇಳೆ ಆರೋಗ್ಯ ಸಿಬ್ಬಂದಿ ಮೃತದೇಹಗಳನ್ನು ಹಗ್ಗದ ಸಹಾಯದಿಂದ ಗುಂಡಿಗೆ ಇಳಿಸಿದ್ದಾರೆ. ಇದಕ್ಕೆ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಂತ್ಯ ಸಂಸ್ಕಾರದ ವೇಳೆ ತಮಗೆ ಪಿಪಿಇ ಕಿಟ್ ನೀಡದೆ ತಾಲೂಕು ಆಡಳಿತ ಬೇಜವಾಬ್ದಾರಿ ತೋರಿದೆ ಎಂದು ದೂರಿದ್ದಾರೆ.