ಬೆಳಗಾವಿ: ಫಸಲ್ ಬಿಮಾ ಯೋಜನೆಯಡಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಅಡಿ ಅಗತ್ಯ ಪರಿಹಾರ ನೀಡಲು ಸಾಧ್ಯವಿಲ್ಲ. ಪರಿಹಾರವನ್ನು ವಿಮಾ ಕಂಪನಿಗಳು ನೀಡಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ತೊಗರಿ ಬೆಳೆ ನಷ್ಟದ ಕುರಿತು ವಿಧಾನ ಪರಿಷತ್ನಲ್ಲಿ ಪ್ರಸ್ತಾಪವಾದಾಗ ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಭೋಜೆಗೌಡ ನಡೆಸಿದ ಚರ್ಚೆಗೆ ಬೆಂಬಲಿಸಿ ಮಾತನಾಡಿ, ವಿಮಾ ಕಂಪನಿಗಳ ಬಳಿ ಸಾಕಷ್ಟು ಹಣ ಇದೆ. ಇವರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಕೇವಲ ತೊಗರಿ ಮಾತ್ರವಲ್ಲ ಹೆಸರುಬೇಳೆ ಸಹ ನಷ್ಟವಾಗಿದೆ. ಇನ್ಪುಟ್ ಸಬ್ಸಿಡಿಗೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಸೂಕ್ತ ಪರಿಹಾರ ಸಿಗಲಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಮ್ಮ ಮನವಿಗೆ ಬೆಂಬಲ ಸಿಗುತ್ತಿಲ್ಲ. ಸರ್ಕಾರ ಸೂಕ್ತ ಉತ್ತರ ನೀಡುತ್ತಿಲ್ಲ. ರೈತರ ಸಮಸ್ಯೆಗೆ ಅವಕಾಶ ನೀಡದೇ ಬೇರೆ ವಿಚಾರಕ್ಕೆ ಹೋಗುವುದು ಸರಿಯಲ್ಲ. ಸರ್ಕಾರದಿಂದ ಪರಿಹಾರ ವಿವರ ಸಿಗಲೇಬೇಕು. ಇನ್ನಷ್ಟು ಚರ್ಚೆಗೆ ಅವಕಾಶ ಬೇಡಿ ಎಂದು ಒತ್ತಾಯಿಸಿದ ಜೆಡಿಎಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಬಾವಿಗಿಳಿದ ಜೆಡಿಎಸ್ ಸದಸ್ಯರು ಅಲ್ಲಿಂದಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಬಿ.ಸಿ.ಪಾಟೀಲ್ ತಾವು ನೀಡಿರುವ ಪರಿಹಾರ ವಿವರ ನೀಡಿದರು. 171 ಕೋಟಿ ರೂ. ಕೇವಲ ತೊಗರಿ ಬೆಳೆಗೆ ಪರಿಹಾರ ನೀಡಿದ್ದೇವೆ ಎಂದರು.
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ರೈತರು ವಿಮೆ ಮೊತ್ತ ಎಷ್ಟು ಕಟ್ಟಿದ್ದಾರೆ. ಅದನ್ನಾದರೂ ಹಿಂತಿರುಗಿಸಿ. ರೈತರಿಗೆ ಆದ ಸಮಸ್ಯೆ ಪರಿಹರಿಸಿ ಎಂದರು. ಸಭಾಪತಿಗಳ ಮನವಿಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ.ಪಾಟೀಲ್, ನಾವು ವಿಮಾ ಕಂಪನಿ ಜತೆ ಮಾತನಾಡುತ್ತೇವೆ. ಇವರಿಂದ ಮಾಹಿತಿ ಪಡೆದು ಸದನಕ್ಕೆ ವಿವರ ಸಲ್ಲಿಸುತ್ತೇವೆ ಎಂದರು. ಸಭಾಪತಿಗಳು ಮಧ್ಯ ಪ್ರವೇಶ ಮಾಡಿ ಮಾತನಾಡಿ, ಅಧಿಕಾರಿಗಳು, ಜೆಡಿಎಸ್ ಸದಸ್ಯರು, ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಇದಕ್ಕೊಂದು ಪರಿಹಾರ ಕಲ್ಪಿಸಿ ಎಂದು ಸೂಚಿಸಿದರು.
ಸಚಿವರು ಸಮ್ಮತಿಸಿದ ಹಿನ್ನೆಲೆ ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಟು ಸ್ಥಳಕ್ಕೆ ವಾಪಾಸಾದರು. ಕಲಾಪದಲ್ಲಿ ಗಮನ ಸೆಳೆಯುವ ಸೂಚನೆ ಅಡಿ ಚರ್ಚೆ ಆರಂಭವಾಯಿತು.
ಮಹನೀಯರ ಜಯಂತಿಗೆ ಕ್ರಮ: ಸದನದಲ್ಲಿ ವಿಶ್ವಕರ್ಮಸಮುದಾಯದ ಮಹನೀಯರ ಜಯಂತಿಗೆ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ಆರೋಪವನ್ನು ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಮಾಡಿದರು. ಇದಕ್ಕೆ ಸದನದಲ್ಲಿ ಪ್ರತಿಪಕ್ಷ ನಾಯಕರು, ಜೆಡಿಎಸ್ ಸದಸ್ಯರಿಂದ ಬೆಂಬಲ ವ್ಯಕ್ತವಾಯಿತು. ಸಭಾನಾಯಕರು ಸಹ ಈ ಬಗ್ಗೆ ಗಮನ ಹರಿಸುವ ಭರವಸೆ ನೀಡಿದರು. ಇದಕ್ಕೆ ಸಭಾನಾಯಕರು ಮಧ್ಯ ಪ್ರವೇಶಿಸಿ ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯದ ನಾಯಕರ ಹಾಗೂ ಮಹನೀಯರ ಜಯಂತಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಸಿಎಂ ಸೇರಿದಂತೆ ಎಲ್ಲರೂ ಮಾಡಬೇಕು.
ಇದನ್ನು ಸಿಎಂಗೆ ಸೂಚಿಸಿ ಎಂದು ತಿಳಿಸಿದರು. ನಂಜುಂಡಿ ಮಾತಿಗೆ ಜೆಡಿಎಸ್ ಸದಸ್ಯ ಶರವಣ ಸಹ ಬೆಂಬಲ ವ್ಯಕ್ತಪಡಿಸಿದರು. ನಮ್ಮವರ ಜಯಂತಿ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ರೀತಿ ಆಗಬೇಕು. ಗೌರವ ಸಲ್ಲಿಸುವ ಕಾರ್ಯ ಮಾಡಬೇಕು. ಹಣ ಹೆಚ್ಚಿಸಬೇಕೆಂದು ಮನವಿ ಮಾಡಿದರು. ನಂಜುಂಡಿ ಮಾತನಾಡಿ, ಸಿಎಂಗೆ ಭಾಗವಹಿಸಲು ಸಾಧ್ಯವಾಗದಿದ್ದರೆ, ಸಂಬಂಧಿಸಿದ ಜಿಲ್ಲಾ ಸಚಿವರು ಪಾಲ್ಗೊಳ್ಳಬೇಕು. ಅದಕ್ಕೆ ಸೂಕ್ತ ನಿರ್ದೇಶನ ಜಾರಿಯಾಗಬೇರು. ಮುಂದೆ ಇಂತಹ ಅವಹೇಳನ ಆಗಬಾರದು ಎಂದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ: ಈಗಾಗಲೇ 68.7 ಕೋಟಿ ರೂ. ಮೊತ್ತದ ಸಹಾಯಧನವನ್ನು ಮಂಡ್ಯ ಭಾಗದ ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಲಾಗಿದೆ. ಪ್ರತಿ ಲೀಟರ್ಗೆ ತಲಾ 5 ರೂ. ನೀಡುತ್ತಿದ್ದು, ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ. 36 ಕೋಟಿ ರೂ. ಮೊತ್ತ ಬಿಡುಗಡೆಯಾಗಿದ್ದು, ಬಾಕಿ ಇರುವ ಪ್ರೋತ್ಸಾಹ ಧನವನ್ನು ಇನ್ನೊಂದು ವಾರದಲ್ಲಿ ವಿತರಿಸುತ್ತೇವೆ ಎಂದು ಭರವಸೆ ಇತ್ತರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ನಡೆದ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸಹ ಮಾತನಾಡಿ, ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಹೆಣ್ಣು ಮಕ್ಕಳು ಹೈನುಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಆರು ತಿಂಗಳಿಗೆ ಒಮ್ಮ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಬಾಕಿ ನೀಡಿಲ್ಲ. ಪ್ರತಿ ತಿಂಗಳ 10 ರ ಒಳಗೆ ಕೊಡುವ ವ್ಯವಸ್ಥೆ ಜಾರಿಗೆ ತನ್ನಿ. ಯಡಿಯೂರಪ್ಪ 2 ರೂ. ಪ್ರೋತ್ಸಾಹ ಧನ ಕೊಟ್ಟರು. ಸಿದ್ದರಾಮಯ್ಯ 4 ಮಾಡಿ ತಮ್ಮ ಅಧಿಕಾರದ ಕೊನೆಯಲ್ಲಿ 5 ರೂ.ಗೆ ಏರಿಸಿದ್ದಾರೆ. ಈಗ ಐದು ವರ್ಷದಿಂದ ಅದೇ ಬೆಲೆ ಇದೆ. 5 ರೂ. ಇದ್ದ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು. ಕೆಎಮ್ಎಂ ಪಶು ಆಹಾರಕ್ಕೆ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ತೆಗೆಯಲಾಗಿದೆ. ಮತ್ತೆ ಕೊಡಿಸಬೇಕು ಎಂದು ಮನವಿ ಮಾಡಿದರು.
ಗಂಟುರೋಗ ಹಿನ್ನೆಲೆ, ಮಳೆ ಕಾರಣಕ್ಕೆ 10 ಲಕ್ಷ ಲೀಟರ್ ಇದ್ದ ಹಾಲಿನ ಉತ್ಪನ್ನ 8 ಲಕ್ಷಕ್ಕೆ ಇಳಿದಿದೆ. ಇನ್ನಷ್ಟು ಕಡಿಮೆ ಆದರೆ ಮಂಡ್ಯದ ಜನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹಾಲಿನ ಪುಡಿ ತಯಾರಿಸಲು ತಗಲುವ ವೆಚ್ಚವನ್ನು ಸರ್ಕಾರ ನೀಡಬೇಕು. 8 ರಲ್ಲಿ 4 ಲಕ್ಷ ಲೀಟರ್ ಮಾತ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಉಳಿದ ಹಾಲು ವ್ಯರ್ಥವಾಗುತ್ತದೆ. ಅದರಿಂದ ಹಾಲಿನ ಪುಡಿ ಮಾಡಲಾಗುತ್ತಿದೆ. 14 ಲಕ್ಷ ಲೀಟರ್ ಹಾಲನ್ನು ನಾವು ಹಿಂದೆ ನೀಡುತ್ತಿದ್ದೆವು. ಸರ್ಕಾರ ನಮ್ಮ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿವರಣೆ ನೀಡಿ, ನೀಡಿದ ಮೊತ್ತ ಹಾಗೂ ಬಾಕಿಯ ವಿವರ ನೀಡಿದರು. ಪ್ರತಿ ತಿಂಗಳು ರೈತರಿಗೆ ಪ್ರೋತ್ಸಾಹ ಧನ ನೀಡಲು ಪ್ರಯತ್ನಿಸುತ್ತೇವೆ. ಪಶು ಆಹಾರಕ್ಕೆ ಸಬ್ಸಿಡಿ ನೀಡುವ ಬಗ್ಗೆ ಪರಿಶೀಲಿಸುತ್ತೇವೆ. ಇದಕ್ಕೆ ತಗಲುವ ವೆಚ್ಚ ಪರಿಶೀಲಿಸುತ್ತೇವೆ ಎಂದರು. 2700 ರೂ. ಪ್ರತಿ ಟನ್ಗೆ ಪಶು ಆಹಾರದ ಬೆಲೆ ಹೆಚ್ಚಿಸಲಾಗಿದೆ. ಇಷ್ಟು ಬೆಲೆ ಏರಿಕೆ ಎಷ್ಟರ ಮಟ್ಟಿಗೆ ಸರಿ. ಏಕಾಏಕಿ ಬೆಲೆ ಏರಿಕೆ ಸರಿಯಲ್ಲ. ನನ್ನನ್ನೂ ಕರೆದು ಸಭೆ ನಡೆಸಿ ಈ ಎಲ್ಲಾ ವಿಚಾರ ಚರ್ಚಿಸಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ವಿಷಯ, ಕಾಂಗ್ರೆಸ್ ನಿಲುವಳಿ ಸೂಚನೆ ಪರಿಗಣನೆಗೆ ಸಭಾಪತಿ ನಕಾರ