ಚಿಕ್ಕೋಡಿ: ಭಾರತೀಯ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸುತ್ತಾರೆ.
ಪ್ರಮುಖವಾಗಿ ಈ ಹಬ್ಬದಲ್ಲಿ ಜೋಕಾಲಿ ಆಡುವುದು ವಿಶೇಷ ಸಂಪ್ರದಾಯ. ಆದರೆ ಗ್ರಾಮವೊಂದರಲ್ಲಿ ಎರಡು ಜೆಸಿಬಿಗೆ ಜೋಕಾಲಿ ಕಟ್ಟಿ ಗ್ರಾಮದ ಜನರು ಆಟವಾಡಿದ್ದು ವಿಶೇಷವಾಗಿತ್ತು.
ಜೆಸಿಬಿಗಳಿಗೆ ಜೋಕಾಲಿ ಕಟ್ಟಿ ಆಡುವ ಮೂಲಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ವಿಭಿನ್ನವಾಗಿ ಪಂಚಮಿ ಹಬ್ಬವನ್ನು ಆಚರಿಸಿದರು. ಇನ್ನು ಗ್ರಾಮದ ಮಕ್ಕಳು ಹಾಗೂ ಯುವಕರು ಜೋಕಾಲಿ ಆಡಿ ಸಂಭ್ರಮಿಸಿದರು.
ಕೊರೊನಾ ಹಿನ್ನೆಲೆ ಅದ್ದೂರಿ ನಾಗ ಪಂಚಮಿ ಹಬ್ಬಕ್ಕೆ ಈ ಬಾರಿ ಬ್ರೇಕ್ ಇರುವುದರಿಂದ ತಮ್ಮದೇ ರೀತಿಯಲ್ಲಿ ಜೆಸಿಬಿಗಳಿಗೆ ಜೋಕಾಲಿ ಕಟ್ಟಿ ಹಬ್ಬ ಆಚರಿಸಿದ್ದಾರೆ.
ಹಬ್ಬದ ಪ್ರಯುಕ್ತ ಜೋಕಾಲಿ ಆಟ ಆಡುವುದು ಹಬ್ಬದ ವಿಶೇಷತೆ. ಮನೆಯ ಚಾವಣಿ, ಮರದ ಕೊಂಬೆಗೆ ಜೋಕಾಲಿ ಕಟ್ಟಿ ಆಡುವ ಸಂಪ್ರದಾಯ ಬಹು ಹಿಂದಿನಿಂದಲೂ ಇದೆ. ಈ ಬಾರಿ ಒಂದು ಹಜ್ಜೆ ಮುಂದೆ ಹೋಗಿ ಎರಡು ಜೆಸಿಬಿಗಳ ಮಧ್ಯೆ ಜೋಕಾಲಿ ಕಟ್ಟಿ ಹಂದಿಗುಂದ ಗ್ರಾಮಸ್ಥರು ಸಂಭ್ರಮಿಸಿದರು.