ಬೀದರ್: ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರ ಮನೆ ಬಾಗಿಲಿಗೆ, ಕೃಷಿ ಇಲಾಖೆ ಬೀಜ,ಗೊಬ್ಬರ ಸರಬರಾಜು ಮಾಡುತ್ತಿದೆ.
ಜಿಲ್ಲೆಯ ಕಮಲನಗರ ತಾಲೂಕಿನ ದಾಬಕಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಥಳೀಯ ಕೃಷಿ ಅಧಿಕಾರಿ ರಮೇಶ್ ಪಾಟೀಲ್,ರೈತರ ಮನೆಗೆ ಖುದ್ದಾಗಿ ಸೋಯಾಬಿನ್, ಉದ್ದು, ಹೆಸರು, ತೊಗರಿ ಬೀಜಗಳನ್ನ ಸರಬರಾಜು ಮಾಡುತ್ತಿದ್ದಾರೆ. ಪ್ರತಿ ವರ್ಷ ರೈತರು ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ರೈತ ಸಂಪರ್ಕ ಕೇಂದ್ರದ ಮುಂದೆ ಬೆಳಗ್ಗೆಯಿಂದ ರಾತ್ರಿಯವರೆಗೆ ಸಾಲುಗಟ್ಟಿ ನಿಂತರೂ ಸರಿಯಾದ ಸಮಯಕ್ಕೆ ಬೀಜಗಳು ಸಿಗುತ್ತಿರಲಿಲ್ಲ.
ಈ ವರ್ಷ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಲ್ಲದೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಮಾಡಿದ್ರೆ, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲ. ಹೀಗಾಗಿ ಕೃಷಿ ಅಧಿಕಾರಿ ರಮೇಶ್, ಖುದ್ದಾಗಿ ಪ್ರತಿ ಹಳ್ಳಿಗಳಲ್ಲಿ ಸುತ್ತಾಡಿ ಮೊದಲು ರೈತರ ಪಟ್ಟಿ ತಯಾರಿಸಿ ಅವರ ಬೀಜದ ಬೇಡಿಕೆಯನ್ನ ಆನ್ಲೈನ್ನಲ್ಲಿ ದೃಢೀಕರಿಸಿ, ನಂತರ ಒಂದು ವಾಹನದಲ್ಲಿ ಬೀಜಗಳನ್ನ ಮನೆ-ಮನೆ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಇಷ್ಟೇ ಅಲ್ಲದೇ, ರಸಗೊಬ್ಬರ ವಿತರಣೆ ಮಾಡುತ್ತಿರುವ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಕಾರ್ಯದರ್ಶಿ ಕೂಡ ಕೃಷಿ ಅಧಿಕಾರಿಯಂತೆ ರಸಗೊಬ್ಬರ ಸರಬರಾಜು ಮಾಡಿದ್ದಾರೆ.