ಬೆಳಗಾವಿ : ಲಂಚಕ್ಕಾಗಿ ಬೇಡಿಕೆ ಇಟ್ಟು ಹೆರಿಗೆ ಶಸ್ತ್ರಕ್ರಿಯೆಗೊಳಗಾಗಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ಸರ್ಜನ್ ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಲಂಚದ ಸಮೇತ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ.
ಡಾ.ವಿರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ವೈದ್ಯನಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಮೂಲದ ಮಹಿಳೆಯನ್ನು ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವೈದ್ಯ 7 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಲಂಚ ನೀಡಲು ವಿಳಂಬವಾಗುತ್ತಿದ್ದ ಕಾರಣಕ್ಕೆ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರಲಿಲ್ಲ.
ವೈದ್ಯನ ವರ್ತನೆಯಿಂದ ಬೇಸತ್ತ ಮಹಿಳೆಯ ಪತಿ ಯಲ್ಲಪ್ಪ ಕೋಲಕಾರ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಡಾ.ವಿರೇಂದ್ರ ಕುಚಬಾಳ ಅವರನ್ನು ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಎಸ್ಪಿ ಬಿ ಎಸ್ ನ್ಯಾಮಗೌಡರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ ಎಂ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಹೆಚ್ ಸುನೀಲ್ ಕುಮಾರ್, ಎ ಎಸ್ ಗುದಿಗೊಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬೆಳಗಾವಿ ಉಪ ಚುನಾವಣೆ.. ಸತೀಶ್ ಪರ ಪ್ರಚಾರಕ್ಕೆ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹಿಂದೇಟು?