ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ನೆಲಕಚ್ಚಿದ್ದ ವ್ಯಾಪಾರ-ವಹಿವಾಟಿಗೆ ದೀಪಾವಳಿ ಕಳೆ ತಂದಿದೆ. ಬೆಳಗಾವಿಯ ಬಹುತೇಕ ಮಾರುಕಟ್ಟೆಗಳಲ್ಲಿ ಬೆಳಕಿನ ಹಬ್ಬದ ವಸ್ತುಗಳ ಖರೀದಿಗೆ ಜನಜಂಗುಳಿ ಸೇರುತ್ತಿರುವುದು ಕಂಡು ಬರುತ್ತಿದ್ದು, ಹಬ್ಬದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ನಗರದ ಖಡೇಬಜಾರ್, ಶನಿವಾರ ಕೂಟ, ಪಾಂಗುಳ ಗಲ್ಲಿ, ಮಾರುತಿ ಗಲ್ಲಿ, ಸಮಾದೇವ ಗಲ್ಲಿ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದೆರಡು ದಿನಗಳಿಂದ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.
ನಾಳೆಯಿಂದ ಆರಂಭವಾಗುವ ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ಜನತೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಗರದ ಜ್ಯುವೆಲ್ಲರಿ ಮಳಿಗೆಗಳು ಹಾಗೂ ಜವಳಿ ಮಳಿಗೆಗಳಲ್ಲಿ ಜನಜಂಗುಳಿ ತುಂಬಿ ತುಳುಕುತ್ತಿದ್ದು, ವ್ಯಾಪಾರ-ವಹಿವಾಟು ಜೋರಾಗಿ ನಡೆಯುತ್ತಿದೆ.
ದಿನಸಿ ವ್ಯಾಪಾರ ಜೋರು
ದೀಪಾವಳಿ ಹಬ್ಬದ ಪ್ರಯುಕ್ತ ದಿನಸಿ ಅಂಗಡಿಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಜೊತೆಗೆ ಬೇಕರಿಗಳಲ್ಲಿಯೂ ಸಿದ್ಧ ತಿಂಡಿ ತಿನಿಸುಗಳ ಖರೀದಿಯೂ ಜೋರಾಗಿದೆ. ಅಲಂಕಾರಿಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಶುರುವಾಗಿದೆ. ಸದ್ಯ ಕೊರೊನಾ ಕರಾಳತೆಗೆ ನಲುಗಿದ್ದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ವಾಹನಗಳ ಖರೀದಿಯಲ್ಲಿಯೂ ಭರಾಟೆ
ಕಾರ್, ಬೈಕ್ ಶೋ ರೂಂಗಳಲ್ಲಿಯೂ ಜನಜಂಗುಳಿ ಕಾಣಿಸುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ವಾಹನಗಳನ್ನು ಖರೀದಿಸುವ ಆಲೋಚನೆಯಲ್ಲಿರುವ ಮಂದಿ ವಾಹನಗಳ ಶೋ ರೂಂಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಅದೇ ರೀತಿ ಟಿವಿ ಮತ್ತು ಮೊಬೈಲ್ ಮಳಿಗೆಗಳಲ್ಲಿಯೂ ಜನರ ದಂಡು ಕಾಣಿಸುತ್ತಿದೆ.
ಕೊರೊನಾಗೆ ಡೋಟ್ ಕೇರ್
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ ಕೊರೊನಾ ಸಂಪೂರ್ಣವಾಗಿ ಹೋಗಿಲ್ಲ. ಸರ್ಕಾರ ಕೊರೊನಾ ಮಾರ್ಗಸೂಚಿಗಳಂತೆ ಹಬ್ಬ ಆಚರಣೆ ಮಾಡುವಂತೆ ಸಲಹೆ ನೀಡಿದೆ. ಆದರೆ ಅನೇಕ ಜನರು ಕೊರೊನಾ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಸೇರಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.